ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ 2026ರಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ನಟ ವಿಜಯ್ ಈಗ ಕೇವಲ ಸೂಪರ್ ಸ್ಟಾರ್ ಮಾತ್ರವಲ್ಲ, ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅವರ ಪೂರ್ಣ ಹೆಸರು ಮತ್ತು ಹಿನ್ನೆಲೆಯ ಕುರಿತು ಹುಡುಕಾಟ ನಡೆಸುವವರ ಸಂಖ್ಯೆ ಹೆಚ್ಚಾಗಿದೆ.
ವಿಜಯ್ ಅವರ ಪೂರ್ಣ ಹೆಸರು ಜೋಸೆಫ್ ವಿಜಯ್ ಚಂದ್ರಶೇಖರ್ (Joseph Vijay Chandrasekhar). ಸಿನೆಮಾ ರಂಗದಲ್ಲಿ ಅವರು ಕೇವಲ ‘ವಿಜಯ್’ ಅಥವಾ ‘ದಳಪತಿ’ ಎಂದೇ ಖ್ಯಾತರಾಗಿದ್ದಾರೆ.ವಿಜಯ್ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದವರು. ಅವರ ತಂದೆ ಎಸ್.ಎ. ಚಂದ್ರಶೇಖರ್ ಪ್ರಖ್ಯಾತ ಚಲನಚಿತ್ರ ನಿರ್ದೇಶಕರು ಮತ್ತು ತಾಯಿ ಶೋಭಾ ಚಂದ್ರಶೇಖರ್ ಅವರು ಗಾಯಕಿ. ವಿಜಯ್ ಅವರ ತಾಯಿ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದು, ತಂದೆ ಕ್ರಿಶ್ಚಿಯನ್ ಧರ್ಮದವರಾಗಿದ್ದಾರೆ.
ವಿಜಯ್ ಅವರು ತಮ್ಮ ರಾಜಕೀಯ ಭಾಷಣಗಳಲ್ಲಿ ಯಾವಾಗಲೂ “ಜಾತಿ ಮತ್ತು ಧರ್ಮ ರಹಿತ ರಾಜಕಾರಣ” ಮಾಡುವುದಾಗಿ ಹೇಳುತ್ತಾ ಬಂದಿದ್ದಾರೆ. ಅವರ ಪಕ್ಷದ ಸಿದ್ಧಾಂತವು ‘ಜಾತಿ ವಿರೋಧಿ’ ಮತ್ತು ‘ಸಮಾನತೆ’ಯ ತಳಹದಿಯ ಮೇಲೆ ನಿಂತಿದೆ.
ಕೆಲವು ವರ್ಷಗಳ ಹಿಂದೆ ‘ಮೆರ್ಸಲ್’ ಚಲನಚಿತ್ರದ ವೇಳೆ ವಿಜಯ್ ಅವರ ಧರ್ಮದ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆದಿತ್ತು. ಆಗ ವಿಜಯ್ ಅವರು ತಮ್ಮ ಅಧಿಕೃತ ಲೆಟರ್ ಹೆಡ್ನಲ್ಲಿ ‘ಜೋಸೆಫ್ ವಿಜಯ್’ ಎಂದೇ ಸಹಿ ಮಾಡುವ ಮೂಲಕ ತಮ್ಮ ಹೆಸರಿನ ಬಗ್ಗೆ ಹೆಮ್ಮೆಯಿದೆ ಎಂದು ಸಂದೇಶ ನೀಡಿದ್ದರು.
ವಿಜಯ್ ಅವರು ಶ್ರೀಲಂಕಾ ಮೂಲದ ತಮಿಳು ಮಹಿಳೆ ಸಂಗೀತಾ ಸ್ವರ್ಣಲಿಂಗಂ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.








