ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿಯ ಸ್ಟಾರ್ ಅಭ್ಯರ್ಥಿ ರತ್ನ ದೇವನಾಥ್ ಅವರು ಪಾನಿಹಟಿ ಕ್ಷೇತ್ರದಲ್ಲಿ ಪ್ರಚಂಡ ವಿಜಯ ದಾಖಲಿಸಿದ್ದಾರೆ. ಆರ್ಜಿ ಕರ್ ಆಸ್ಪತ್ರೆಯ ಸಂತ್ರಸ್ತ ವೈದ್ಯೆಯ ತಾಯಿಯಾಗಿರುವ ರತ್ನ ದೇವನಾಥ್ ಅವರ ಈ ಗೆಲುವು ರಾಜಕೀಯವಾಗಿ ಮಾತ್ರವಲ್ಲದೆ, ನೈತಿಕವಾಗಿಯೂ ದೊಡ್ಡ ಸಂದೇಶ ರವಾನಿಸಿದೆ.
ರತ್ನ ದೇವನಾಥ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ, ಟಿಎಂಸಿಯ ತೀರ್ಥಂಕರ್ ಘೋಷ್ ವಿರುದ್ಧ 28,836 ಮತಗಳ ಬೃಹತ್ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.
ಮತ ಎಣಿಕೆಯ ಆರಂಭಿಕ ಹಂತದಲ್ಲಿ ಟಿಎಂಸಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದರು. ಆದರೆ, ನಂತರದ ಸುತ್ತುಗಳಲ್ಲಿ ರತ್ನ ದೇವನಾಥ್ ಅವರು ಭಾರಿ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ ವಿಜಯದ ನಗೆ ಬೀರಿದರು.
ಆರ್ಜಿ ಕರ್ ಘಟನೆಯ ನಂತರ ಮಗಳ ನ್ಯಾಯಕ್ಕಾಗಿ ಹೋರಾಡುತ್ತಿದ್ದ ರತ್ನ ಅವರಿಗೆ ಪಾನಿಹಟಿಯ ಜನತೆ ಮತಗಳ ಮೂಲಕ ಬೆಂಬಲ ಸೂಚಿಸಿದ್ದಾರೆ.
ಗೆಲುವಿನ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರತ್ನ ದೇವನಾಥ್, “ಇದು ನನ್ನ ಗೆಲುವಲ್ಲ, ನ್ಯಾಯಕ್ಕಾಗಿ ಹಂಬಲಿಸುತ್ತಿದ್ದ ಬಂಗಾಳದ ಪ್ರತಿಯೊಬ್ಬ ತಾಯಿಯ ಗೆಲುವು. ನನ್ನ ಮಗಳಿಗೆ ನ್ಯಾಯ ದೊರಕಿಸುವ ಮತ್ತು ರಾಜ್ಯದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಜನರು ನನಗೆ ಆಶೀರ್ವಾದ ಮಾಡಿದ್ದಾರೆ,” ಎಂದು ಭಾವುಕರಾಗಿ ನುಡಿದರು.








