ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ ತಿಂಗಳು ಮದ್ಯ ಮಾರಾಟದಲ್ಲಿ ಹೊಸ ಇತಿಹಾಸ ಬರೆದಿದೆ. ಅಬಕಾರಿ ಇಲಾಖೆಯ ಕಳೆದ 13 ವರ್ಷಗಳ ಇತಿಹಾಸದಲ್ಲೇ ತಿಂಗಳೊಂದರಲ್ಲಿ ಇಷ್ಟೊಂದು ಭಾರಿ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿರುವುದು ಇದೇ ಮೊದಲು.
ಏಪ್ರಿಲ್ ತಿಂಗಳಲ್ಲಿ ಒಟ್ಟು 118.56 ಲಕ್ಷ ಬಾಕ್ಸ್ ಮದ್ಯ ಮಾರಾಟವಾಗಿದೆ. ಐಎಂಎಲ್ (IML): ವಿಸ್ಕಿ, ಬ್ರಾಂಡಿ, ರಮ್, ಜಿನ್ ಸೇರಿದಂತೆ ಒಟ್ಟು 68.17 ಲಕ್ಷ ಬಾಕ್ಸ್ ಐಎಂಎಲ್ ಮದ್ಯ ಮಾರಾಟವಾಗಿದ್ದು, ಕಳೆದ ವರ್ಷಕ್ಕೆ (57.44 ಲಕ್ಷ ಬಾಕ್ಸ್) ಹೋಲಿಸಿದರೆ ಶೇ. 18.68 ರಷ್ಟು ಪ್ರಗತಿ ಕಂಡಿದೆ.
ಬಿಯರ್: ಈ ಬಾರಿ 50.39 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದು, ಕಳೆದ ವರ್ಷದ (41.60 ಲಕ್ಷ ಬಾಕ್ಸ್) ದಾಖಲೆಗಿಂತ ಶೇ. 21.13 ರಷ್ಟು ಏರಿಕೆ ಕಂಡಿದೆ.
ರಾಜಸ್ವ ಸಂಗ್ರಹದಲ್ಲಿ ಭಾರಿ ಏರಿಕೆ:
ಮದ್ಯ ಮಾರಾಟದಿಂದ ಸರ್ಕಾರಕ್ಕೆ ಬರುವ ಆದಾಯದಲ್ಲೂ ಗಣನೀಯ ಹೆಚ್ಚಳ ಕಂಡುಬಂದಿದೆ. 2025ರ ಏಪ್ರಿಲ್ನಲ್ಲಿ ₹2904 ಕೋಟಿ ರಾಜಸ್ವ ಸಂಗ್ರಹವಾಗಿದ್ದರೆ, ಈ ವರ್ಷದ ಏಪ್ರಿಲ್ನಲ್ಲಿ ₹3688 ಕೋಟಿ ರಾಜಸ್ವ ಸಂಗ್ರಹವಾಗಿದ್ದು, ಶೇ. 27 ರಷ್ಟು ಬೆಳವಣಿಗೆ ದಾಖಲಾಗಿದೆ.
ಮಾರಾಟ ಹೆಚ್ಚಳಕ್ಕೆ ಕಾರಣಗಳೇನು?
ನೆರೆ ರಾಜ್ಯಗಳ ಎಲೆಕ್ಷನ್ ಎಫೆಕ್ಟ್: ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕೇರಳ ಮತ್ತು ತಮಿಳುನಾಡು ವಿಧಾನಸಭೆಗೆ ಏಪ್ರಿಲ್ನಲ್ಲಿ ಚುನಾವಣೆ ನಡೆದಿದೆ. ಈ ರಾಜ್ಯಗಳಲ್ಲಿ ಮತದಾನದ ಮುನ್ನ ಮದ್ಯ ಮಾರಾಟ ನಿಷೇಧಿಸಿದ್ದರಿಂದ, ಗಡಿ ಭಾಗಗಳಲ್ಲಿ ಮದ್ಯದ ಬೇಡಿಕೆ ಹೆಚ್ಚಾಗಿತ್ತು.
ಉಪ ಚುನಾವಣೆ: ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯೂ ಮದ್ಯ ಮಾರಾಟದ ಹೆಚ್ಚಳಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. 2013ರಿಂದ ಈಚೆಗೆ ನಡೆದ ಮದ್ಯ ಮಾರಾಟದ ಇತಿಹಾಸದಲ್ಲೇ ಈ ಏಪ್ರಿಲ್ ತಿಂಗಳು ಗರಿಷ್ಠ ಪ್ರಮಾಣದ ಮಾರಾಟವನ್ನು ಕಂಡು ಅಬಕಾರಿ ಇಲಾಖೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.








