ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕಾಪಡೆಯ ಯುದ್ಧನೌಕೆಯ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂಬ ಇರಾನ್ ಮಾಧ್ಯಮಗಳ ವರದಿಯನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಸಾರಾಸಗಟಾಗಿ ತಳ್ಳಿಹಾಕಿದೆ. ಈ ವದಂತಿಗಳು ಸುಳ್ಳು ಎಂದು ಹೇಳಿರುವ ಅಮೆರಿಕ, ತನ್ನ ನೌಕೆಗಳು ಸುರಕ್ಷಿತವಾಗಿವೆ ಎಂದು ಸ್ಪಷ್ಟಪಡಿಸಿದೆ.
ಇರಾನ್‌ನ ಅರೆ-ಸರ್ಕಾರಿ ಸುದ್ದಿ ಸಂಸ್ಥೆ ‘ಫಾರ್ಸ್’ (Fars) ವರದಿ ಮಾಡಿರುವಂತೆ, ಜ್ಯಾಸ್ಕ್ ದ್ವೀಪದ ಬಳಿ ಅಮೆರಿಕದ ಫ್ರಿಗೇಟ್ ಮಾದರಿಯ ಯುದ್ಧನೌಕೆಯ ಮೇಲೆ ಇರಾನ್ ನೌಕಾಸೇನೆಯು ಎರಡು ಕ್ಷಿಪಣಿಗಳನ್ನು ಉಡಾಯಿಸಿದೆ. ಅಮೆರಿಕದ ನೌಕೆಯು ಇರಾನ್‌ನ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಜಲಸಂಧಿಯನ್ನು ಪ್ರವೇಶಿಸಲು ಪ್ರಯತ್ನಿಸಿದ ಕಾರಣ ಈ ದಾಳಿ ನಡೆದಿದೆ ಮತ್ತು ದಾಳಿಯ ನಂತರ ನೌಕೆಯು ಅಲ್ಲಿಂದ ಪಲಾಯನ ಮಾಡಿದೆ ಎಂದು ಇರಾನ್ ಹೇಳಿಕೊಂಡಿತ್ತು.
ಅಮೆರಿಕದ ಸ್ಪಷ್ಟನೆ:
ಈ ಕುರಿತು ಎಕ್ಸ್ (ಟ್ವಿಟ್ಟರ್) ನಲ್ಲಿ ಸ್ಪಷ್ಟನೆ ನೀಡಿರುವ CENTCOM, “ಯಾವುದೇ ಅಮೆರಿಕದ ನೌಕೆಗಳ ಮೇಲೆ ದಾಳಿ ನಡೆದಿಲ್ಲ. ಉಡಾವಣೆ ಮಾಡಲಾದ ಕ್ಷಿಪಣಿಗಳು ನಮ್ಮ ಹಡಗುಗಳ ಹತ್ತಿರವೂ ಬಂದಿಲ್ಲ,” ಎಂದು ತಿಳಿಸಿದೆ. ಅಲ್ಲದೆ, ‘ಪ್ರಾಜೆಕ್ಟ್ ಫ್ರೀಡಂ’ (Project Freedom) ಅಡಿಯಲ್ಲಿ ವಾಣಿಜ್ಯ ಹಡಗುಗಳಿಗೆ ಭದ್ರತೆ ನೀಡುವ ಕಾರ್ಯವನ್ನು ಅಮೆರಿಕ ಮುಂದುವರಿಸಲಿದೆ ಎಂದು ಹೇಳಿದೆ.








