ಬೆಂಗಳೂರು: ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಹೈಕೋರ್ಟ್‌ನಲ್ಲಿ ಜಾಮೀನು ನಿರಾಕರಿಸಲ್ಪಟ್ಟ ಹಿನ್ನೆಲೆಯಲ್ಲಿ ದರ್ಶನ್ ಸಲ್ಲಿಸಿರುವ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ದರ್ಶನ್ ಅವರು ತಾವು ಜೈಲಿನಲ್ಲಿ ಅನುಭವಿಸುತ್ತಿರುವ ಸಂಕಷ್ಟಗಳನ್ನು ಸುದೀರ್ಘವಾಗಿ ವಿವರಿಸಿದ್ದಾರೆ. ಜೈಲಿನಲ್ಲಿ ತಮ್ಮನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಮತ್ತು ನಿಯಮಗಳನ್ನು ಮೀರಿ ಕ್ವಾರಂಟೈನ್ ಸೆಲ್‌ನಲ್ಲಿ ಇರಿಸಲಾಗಿದೆ ಎಂದು ದೂರಿದ್ದಾರೆ.
ಸಹಕೈದಿಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಎದುರಾಗುತ್ತಿದೆ. ಅಲ್ಲದೆ, ಕುಟುಂಬದವರನ್ನು ಭೇಟಿ ಮಾಡಲು ಸರಿಯಾದ ಸಮಯ ನೀಡುತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ. ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದರೂ ಕೇವಲ 2-3 ಬಾರಿ ಮಾತ್ರ ಫಿಸಿಯೋಥೆರಪಿಗೆ ಅವಕಾಶ ನೀಡಲಾಗಿದೆ. ಅಗತ್ಯವಾದ ಆಹಾರ, ಬಟ್ಟೆ ಮತ್ತು ಹಾಸಿಗೆಯನ್ನು ಪಡೆಯಲು ಜೈಲು ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ತಮ್ಮ ವೃತ್ತಿಜೀವನಕ್ಕೆ ಎದುರಾಗಿರುವ ಆರ್ಥಿಕ ಸಂಕಷ್ಟದ ಬಗ್ಗೆಯೂ ದರ್ಶನ್ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರತಿವರ್ಷ 2-3 ಸಿನಿಮಾಗಳಿಗೆ ಸಹಿ ಮಾಡುತ್ತಿದ್ದ ನಾನು, ಈಗ ಕೆವಿಎನ್ ಪ್ರೊಡಕ್ಷನ್ ಮತ್ತು ಮೀಡಿಯಾ ಹೌಸ್ ಸ್ಟುಡಿಯೋಸ್‌ನಂತಹ ಸಂಸ್ಥೆಗಳ ಚಿತ್ರಗಳಿಂದ ವಂಚಿತನಾಗಿದ್ದೇನೆ. ನಿರ್ಮಾಪಕರು ಈಗಾಗಲೇ ಸುಮಾರು 6 ಕೋಟಿ ರೂಪಾಯಿ ಬಂಡವಾಳ ಹೂಡಿದ್ದು, ನನ್ನ ಜೈಲುವಾಸದಿಂದಾಗಿ ಚಿತ್ರೀಕರಣ ಸ್ಥಗಿತಗೊಂಡಿದೆ. ಇದು ನನ್ನ ಮೂಲಭೂತ ಹಕ್ಕಿನ ಹರಣವಾಗಿದೆ ಎಂದು ಅವರು ವಾದಿಸಿದ್ದಾರೆ.
ತನಿಖಾ ಸಂಸ್ಥೆಯು 262 ಸಾಕ್ಷಿಗಳ ಪಟ್ಟಿಯನ್ನು ಸಲ್ಲಿಸಿದೆ. ಆದರೆ ಕಳೆದ 8 ತಿಂಗಳ ಅವಧಿಯಲ್ಲಿ ಕೇವಲ 10 ಸಾಕ್ಷಿಗಳ ವಿಚಾರಣೆ ಮಾತ್ರ ನಡೆದಿದೆ. ಈ ವೇಗದಲ್ಲಿ ವಿಚಾರಣೆ ಮುಂದುವರಿದರೆ ಪ್ರಕರಣ ಮುಕ್ತಾಯಗೊಳ್ಳಲು ದಶಕಗಳೇ ಬೇಕಾಗಬಹುದು. ಈ ಹಿನ್ನೆಲೆಯಲ್ಲಿ ತಮಗೆ ಕೂಡಲೇ ಜಾಮೀನು ಮಂಜೂರು ಮಾಡಬೇಕೆಂದು ದರ್ಶನ್ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.








