ಬೆಂಗಳೂರು: ಹೈಕೋರ್ಟ್ ಸೂಚನೆಯಂತೆ ನಡೆದ ಅಂಚೆ ಮತಗಳ ಮರುಎಣಿಕೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು 52 ಮತಗಳ ಅಂತರದಿಂದ ವಿಜೇತರಾಗಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗವು ಭಾನುವಾರ ತಡರಾತ್ರಿ ಅಧಿಕೃತವಾಗಿ ಘೋಷಿಸಿದೆ.
2023ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದಾಗ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಡಿ.ಎನ್. ಜೀವರಾಜ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಂದಿನ ಜಿಲ್ಲಾಧಿಕಾರಿ ರಮೇಶ್ ಮತ್ತು ಚುನಾವಣಾಧಿಕಾರಿ ವೇದಮೂರ್ತಿ ವಿರುದ್ಧ ಪೊಲೀಸರಿಗೂ ದೂರು ನೀಡಲಾಗಿತ್ತು. ಈ ದೂರಿನ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅಂಚೆ ಮತಗಳ ಮರುಎಣಿಕೆಗೆ ಆದೇಶಿಸಿತ್ತು.
ಮರುಎಣಿಕೆಯಲ್ಲಿ ಬದಲಾದ ಫಲಿತಾಂಶ
ಶನಿವಾರ ತಡರಾತ್ರಿಯವರೆಗೆ ನಡೆದ ಮರುಎಣಿಕೆ ಪ್ರಕ್ರಿಯೆಯಲ್ಲಿ ಫಲಿತಾಂಶ ತಲೆಕೆಳಗಾಗಿದೆ. ಡಿ.ಎನ್. ಜೀವರಾಜ್ (ಬಿಜೆಪಿ) 2023ರಲ್ಲಿ 692 ಅಂಚೆ ಮತಗಳನ್ನು ಪಡೆದಿದ್ದರು. ಮರುಎಣಿಕೆಯಲ್ಲಿ ಇವರ ಮತಗಳ ಸಂಖ್ಯೆ 690ಕ್ಕೆ ಇಳಿಕೆಯಾಯಿತು (ಕೇವಲ 2 ಮತಗಳ ಇಳಿಕೆ).
ಟಿ.ಡಿ. ರಾಜೇಗೌಡ (ಕಾಂಗ್ರೆಸ್) ಈ ಹಿಂದೆ ಇವರು 569 ಅಂಚೆ ಮತಗಳನ್ನು ಪಡೆದಿದ್ದರು. ಆದರೆ ಮರುಎಣಿಕೆಯಲ್ಲಿ ಇವರು ಪಡೆದಿದ್ದ ಮತಗಳ ಪೈಕಿ 255 ಮತಗಳು ಅಮಾನ್ಯಗೊಂಡಿವೆ. ಇದರಿಂದಾಗಿ ಅವರ ಅಂಚೆ ಮತಗಳ ಸಂಖ್ಯೆ 314ಕ್ಕೆ ಕುಸಿಯಿತು. ಈ ಭಾರಿ ವ್ಯತ್ಯಾಸದಿಂದಾಗಿ ಡಿ.ಎನ್. ಜೀವರಾಜ್ ಅವರು ಒಟ್ಟಾರೆ 52 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ.
ಚುನಾವಣಾ ಆಯೋಗದ ಈ ಘೋಷಣೆಯ ಬೆನ್ನಲ್ಲೇ ಡಿ.ಎನ್. ಜೀವರಾಜ್ ಅವರು ಸೋಮವಾರ ಅಥವಾ ಮಂಗಳವಾರ ವಿಧಾನಸಭಾ ಸ್ಪೀಕರ್ ಕಚೇರಿಯಲ್ಲಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಇನ್ನೊಂದೆಡೆ, ಈ ಫಲಿತಾಂಶದ ವಿರುದ್ಧ ಕಾನೂನು ಹೋರಾಟ ಮುಂದುವರಿಸುವುದಾಗಿ ಮತ್ತು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಟಿ.ಡಿ. ರಾಜೇಗೌಡ ತಿಳಿಸಿದ್ದಾರೆ.








