ಟೆಹ್ರಾನ್: ವಿಶ್ವದ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೇಲೆ ತನ್ನ ಸಂಪೂರ್ಣ ನಿಯಂತ್ರಣವನ್ನು ಪ್ರತಿಪಾದಿಸಿರುವ ಇರಾನ್ ಸೇನೆ, “ಇರಾನ್ನ ಅನುಮತಿಯಿಲ್ಲದೆ ಯಾವುದೇ ಹಡಗು ಈ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಿಲ್ಲ” ಎಂದು ಕಡಕ್ ಎಚ್ಚರಿಕೆ ನೀಡಿದೆ. ಅಮೆರಿಕ ಮತ್ತು ಇಸ್ರೇಲ್ ವಿಧಿಸಿರುವ ನೌಕಾ ದಿಗ್ಬಂಧನದ ನಡುವೆಯೇ ಇರಾನ್ ಈ ಹೇಳಿಕೆ ನೀಡಿರುವುದು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭೀತಿ ಮೂಡಿಸಿದೆ.
“ಹಾರ್ಮುಜ್ ಜಲಸಂಧಿಯು ಇರಾನ್ನ ಪ್ರಾದೇಶಿಕ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಸಂಚರಿಸುವ ಪ್ರತಿಯೊಂದು ನೌಕೆಯೂ ಇರಾನ್ ನೌಕಾಪಡೆಯ ನಿಯಮಗಳನ್ನು ಪಾಲಿಸಬೇಕು ಮತ್ತು ಅನುಮತಿ ಪಡೆಯುವುದು ಕಡ್ಡಾಯ” ಎಂದು ಇರಾನ್ ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕವು ಈ ಭಾಗದಲ್ಲಿ ತನ್ನ ಯುದ್ಧನೌಕೆಗಳನ್ನು ನಿಯೋಜಿಸಿರುವುದನ್ನು ಖಂಡಿಸಿರುವ ಇರಾನ್, ಯಾವುದೇ ಅತಿಕ್ರಮಣ ನಡೆದರೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಹೇಳಿದೆ. ವಿಶ್ವದ ಒಟ್ಟು ತೈಲ ರಫ್ತಿನ ಶೇ. 20ಕ್ಕೂ ಹೆಚ್ಚು ಭಾಗ ಈ ಮಾರ್ಗದ ಮೂಲಕವೇ ಸಾಗುವುದರಿಂದ, ಇರಾನ್ನ ಈ ನಿರ್ಧಾರವು ಜಾಗತಿಕ ಇಂಧನ ಭದ್ರತೆಯ ಮೇಲೆ ನೇರ ಪರಿಣಾಮ ಬೀರಲಿದೆ.








