ಬೆಂಗಳೂರು: ಸ್ಯಾಂಡಲ್ವುಡ್ ನಟ ಚೇತನ್ ಅಹಿಂಸಾ ನೀಡಿದ ದೂರಿನನ್ವಯ ಹಿರಿಯ ಚಲನಚಿತ್ರ ನಿರ್ಮಾಪಕ ಸಾ.ರಾ. ಗೋವಿಂದು ಮತ್ತು ಇತರರ ವಿರುದ್ಧ ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ.
ಪ್ರಕರಣದ ಹಿನ್ನೆಲೆ ಏನು?
ಇತ್ತೀಚೆಗೆ ನಟ ಚೇತನ್ ಅಹಿಂಸಾ ಅವರು ಡಾ. ರಾಜ್ಕುಮಾರ್ ಅವರ ಸಮಾಧಿ ಜಾಗದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಈ ಪೋಸ್ಟ್ ಕನ್ನಡಿಗರ ಮತ್ತು ರಾಜ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಶನಿವಾರ ಸಾ.ರಾ. ಗೋವಿಂದು ನೇತೃತ್ವದ ತಂಡವು ಚೇತನ್ ಅವರ ಮನೆಗೆ ತೆರಳಿ ಪ್ರತಿಭಟಿಸಿತ್ತು.
ದೂರಿನಲ್ಲಿ ಏನಿದೆ?
ತಮ್ಮ ಮನೆಗೆ ನುಗ್ಗಿದ ಸಾ.ರಾ. ಗೋವಿಂದು, ಶಿವರಾಮೇಗೌಡ, ಶಿವಕುಮಾರ್ ನಾಯ್ಕ್ ಹಾಗೂ ಬೆಂಬಲಿಗರು ಗಲಾಟೆ ಮಾಡಿದ್ದಾರೆ ಎಂದು ಚೇತನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಲಾಗಿದೆ. ಸಾ.ರಾ. ಗೋವಿಂದು ಅವರು ದುರಹಂಕಾರ ಮತ್ತು ಗೂಂಡಾಗಿರಿಯಿಂದ ವರ್ತಿಸುತ್ತಿದ್ದಾರೆ ಎಂದು ಚೇತನ್ ಆರೋಪಿಸಿದ್ದಾರೆ.
ಚೇತನ್ ಅಹಿಂಸಾ ಪ್ರತಿಕ್ರಿಯೆ:
“ಸಾ.ರಾ. ಗೋವಿಂದು ಅವರು ಶನಿವಾರ ನನ್ನ ಮನೆ ಬಳಿ ಬಂದು ಅಸಭ್ಯವಾಗಿ ವರ್ತಿಸಿದ್ದಾರೆ. ಅವರ ಹಿನ್ನೆಲೆಯೇ ಬೇರೆಯಿದೆ, ಅವರು ಗೂಂಡಾಗಿರಿ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ನಾವು ಸೂಕ್ತ ದಾಖಲೆಗಳನ್ನು ಒದಗಿಸಿ ದೂರು ನೀಡಿದ್ದೇವೆ,” ಎಂದು ಚೇತನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪ್ರಸ್ತುತ ಶೇಷಾದ್ರಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.








