ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ವಾತಾವರಣವು ಈಗ ವಿಮಾನಯಾನ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರಿದೆ. ಹೆಚ್ಚುತ್ತಿರುವ ವಿಮಾನ ಇಂಧನ (ATF) ಬೆಲೆಗಳು ಮತ್ತು ಭದ್ರತಾ ಕಾರಣಗಳಿಂದಾಗಿ ಸಾರ್ವಜನಿಕ ವಲಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ (Air India) ತನ್ನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ.
ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ವಿಮಾನ ಇಂಧನ ವೆಚ್ಚವು ಏರ್ ಇಂಡಿಯಾದ ಆರ್ಥಿಕ ಹೊರೆಯನ್ನ ಹೆಚ್ಚಿಸಿದೆ.ಇರಾನ್ ಮತ್ತು ಇರಾಕ್ ವಾಯುಪ್ರದೇಶವನ್ನು ಬಳಸದಂತೆ ಸೂಚನೆ ಇರುವುದರಿಂದ, ವಿಮಾನಗಳು ಸುತ್ತು ಬಳಸಿ ಸಂಚರಿಸಬೇಕಾಗಿದೆ. ಇದರಿಂದ ಹೆಚ್ಚಿನ ಇಂಧನ ವ್ಯಯವಾಗುತ್ತಿದ್ದು, ಕಾರ್ಯಾಚರಣಾ ವೆಚ್ಚ ದುಬಾರಿಯಾಗಿದೆ.
ಏರ್ ಇಂಡಿಯಾ ತನ್ನ ಅಧಿಕೃತ ಪ್ರಕಟಣೆಯಲ್ಲಿ ಕೆಲವು ಪ್ರಮುಖ ಮಾರ್ಗಗಳ ವಿಮಾನಗಳ ಸಂಖ್ಯೆಯನ್ನು ಕಡಿಮೆ ಮಾಡುವುದಾಗಿ ತಿಳಿಸಿದೆ:
ಯುರೋಪ್ ಮಾರ್ಗ: ಲಂಡನ್, ಪ್ಯಾರಿಸ್ ಮತ್ತು ಫ್ರಾಂಕ್ಫರ್ಟ್ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಲಿದೆ.
ಅಮೆರಿಕ ಮಾರ್ಗ: ನ್ಯೂಯಾರ್ಕ್, ಚಿಕಾಗೊ ಮತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳುವ ವಿಮಾನಗಳ ಸಂಖ್ಯೆ ಕಡಿತವಾಗುವ ಸಾಧ್ಯತೆ ಇದೆ.
ಪಶ್ಚಿಮ ಏಷ್ಯಾ: ದುಬೈ ಮತ್ತು ಸೌದಿ ಅರೇಬಿಯಾದ ಕೆಲವು ನಗರಗಳಿಗೆ ತೆರಳುವ ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.








