ನವದೆಹಲಿ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೀಡಿದ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಬಾಂಗ್ಲಾದೇಶ ಸರ್ಕಾರವು ಭಾರತದ ಹಂಗಾಮಿ ಹೈಕಮಿಷನರ್ ಪವನ್ ಬಧೆ ಅವರಿಗೆ ಅಧಿಕೃತವಾಗಿ ಸಮನ್ಸ್ ಜಾರಿ ಮಾಡಿ ಪ್ರತಿಭಟನೆ ದಾಖಲಿಸಿದೆ.
ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯದ ಮಹಾನಿರ್ದೇಶಕಿ ಇಶ್ರತ್ ಜಹಾನ್ ಅವರು, ಶರ್ಮಾ ಅವರ ಹೇಳಿಕೆಗಳು “ಅವಮಾನಕರ” ಮತ್ತು “ಉಭಯ ದೇಶಗಳ ಬಾಂಧವ್ಯಕ್ಕೆ ಧಕ್ಕೆ ತರುವಂತಿವೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 25ರಂದು ಬಗುಯಾಟಿಯಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ್ದ ಶರ್ಮಾ, “ಬಾಂಗ್ಲಾದೇಶದ ಮುಸ್ಲಿಂ ನುಸುಳುಕೋರರನ್ನು ಒದ್ದೋಡಿಸಬೇಕೇ ಅಥವಾ ಬೇಡವೇ? ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳನ್ನು ನಾವು ಮರೆತಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಾನು ಇವರನ್ನೆಲ್ಲಾ ಹೊರಹಾಕುತ್ತೇನೆ. ನಾನು ಬಾಗಿಲಿಗೆ ಬೀಗ ಹಾಕುತ್ತೇನೆ, ಅವರು ಮತ್ತೆ ಹಿಂತಿರುಗದಂತೆ ನೋಡಿಕೊಳ್ಳುತ್ತೇನೆ,” ಎಂದು ಗುಡುಗಿದ್ದರು.
ಪಶ್ಚಿಮ ಬಂಗಾಳವು ನುಸುಳುಕೋರರಿಗೆ “ಸುರಕ್ಷಿತ ಕಾರಿಡಾರ್” ಆಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ ಅವರು, “ಮುಸ್ಲಿಂ ಜನಸಂಖ್ಯೆಯು 50% ಮೀರಿದ ಕಡೆಗಳಲ್ಲಿ ಶರಿಯತ್ ಕಾನೂನಿನ ಬೇಡಿಕೆ ಶುರುವಾಗುತ್ತದೆ. ಜನಸಂಖ್ಯಾ ಸಮತೋಲನ ಇರುವವರೆಗೆ ಮಾತ್ರ ಜಾತ್ಯತೀತತೆ ಸುರಕ್ಷಿತವಾಗಿರುತ್ತದೆ,” ಎಂದು ಪ್ರತಿಪಾದಿಸಿದರು.
ಪಶ್ಚಿಮ ಬಂಗಾಳದ ಭದ್ರತೆಯು ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳೊಂದಿಗೆ ಬೆಸೆದುಕೊಂಡಿದೆ ಎಂದು ಶರ್ಮಾ ವಾದಿಸಿದರು. “ಬಂಗಾಳವು ಭಾರತದ ಪ್ರಮುಖ ಗೇಟ್‌ಕೀಪರ್ ಇದ್ದಂತೆ. ಮಾಲ್ಡಾ ಅಥವಾ ಮುರ್ಷಿದಾಬಾದ್ ಮೂಲಕ ನುಸುಳುವಿಕೆ ನಡೆದರೆ, ಅದರ ಪರಿಣಾಮ ಕೇವಲ ಬಂಗಾಳಕ್ಕೆ ಸೀಮಿತವಾಗದೆ ಬಿಹಾರ, ಜಾರ್ಖಂಡ್ ಮತ್ತು ಇಡೀ ಈಶಾನ್ಯ ಭಾರತದ ಮೇಲೆ ಬೀರುತ್ತದೆ,” ಎಂದು ಅವರು ಅಂಕಿಅಂಶಗಳೊಂದಿಗೆ ವಿವರಿಸಿದರು.
ಅಸ್ಸಾಂ ಸಿಎಂ ಬಂಗಾಳದಲ್ಲಿ ಏಕೆ ಪ್ರಚಾರ ಮಾಡುತ್ತಿದ್ದಾರೆ ಎಂಬ ತೃಣಮೂಲ ಕಾಂಗ್ರೆಸ್‌ನ ಪ್ರಶ್ನೆಗೆ ಉತ್ತರಿಸಿದ ಅವರು, “ಇದು ಕೇವಲ ಅಸ್ಸಾಂ ಅಥವಾ ಬಂಗಾಳದ ವಿಷಯವಲ್ಲ, ಇದು ರಾಷ್ಟ್ರೀಯ ಭದ್ರತೆಯ ವಿಷಯ. 2026ರ ಜನಗಣತಿಯ ವೇಳೆಗೆ ಇಲ್ಲಿನ ಜನಸಂಖ್ಯಾ ಚಿತ್ರಣ 32% ರಷ್ಟು ಬದಲಾಗುವ ಮುನ್ಸೂಚನೆ ಇದೆ. ಇದನ್ನು ತಡೆಯದಿದ್ದರೆ ಮುಂದಿನ 20 ವರ್ಷಗಳಲ್ಲಿ ಅಸ್ಸಾಂ ಮತ್ತು ಬಂಗಾಳದ ಭವಿಷ್ಯ ನಾಶವಾಗಲಿದೆ,” ಎಂದು ಎಚ್ಚರಿಸಿದರು.








