ತುಮಕೂರು : ಕಳೆದ ಕೆಲವು ದಿನಗಳ ಹಿಂದೆ ತುಮಕೂರಲ್ಲಿ ನವಿಲುಗಳು ಸಾವನ್ನಪ್ಪಿದ್ದವು. ಇದೀಗ ಜಿಲ್ಲೆಯಲ್ಲಿ ಹಕ್ಕಿಜ್ವರದ ಭೀತಿ ಹೆಚ್ಚಾಗಿದ್ದು, 44 ನವಿಲುಗಳ ಬೆನ್ನಲ್ಲೇ ಈಗ 30 ಕೋಳಿಗಳ ಸರಣಿ ಸಾವು ವರದಿಯಾಗಿದೆ. ಮೃತ ಕೋಳಿಗಳ ಸ್ಯಾಂಪಲ್ ಅನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಜಿಲ್ಲಾಧಿಕಾರಿಗಳು ಕಲ್ಲಳ್ಳಿ ಸೇರಿದಂತೆ 5 ಗ್ರಾಮಗಳನ್ನು ಕಂಟೋನ್ಮೆಂಟ್ ಜೋನ್ ಎಂದು ಘೋಷಿಸಿ, ಚಿಕನ್ ಅಂಗಡಿಗಳನ್ನು ಮುಚ್ಚಲು ಆದೇಶಿಸಿದ್ದಾರೆ.
ಕಳೆದ ಏಪ್ರಿಲ್ 16ರಿಂದ ತುಮಕೂರು ತಾಲೂಕಿನಾದ್ಯಂತ ನವಿಲುಗಳ ಸರಣಿ ಸಾವು ಆರಂಭವಾಗಿತ್ತು. ಕೇವಲ 11 ದಿನಗಳಲ್ಲಿ ಬರೋಬ್ಬರಿ 44 ನವಿಲುಗಳು ಮೃತಪಟ್ಟಿದ್ದವು. ಆರಂಭದಲ್ಲಿ ಜಿಲ್ಲೆಯಲ್ಲಿ ತಾಪಮಾನ ಏರುತ್ತಿದ್ದ ಕಾರಣ, ಅತಿಯಾದ ಶಾಖ ಮತ್ತು ನಿರ್ಜಲೀಕರಣದಿಂದ ಈ ಸಾವುಗಳು ಸಂಭವಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದರು. ಆದರೆ ನಂತರ ಬಂದ FSL ವರದಿಯಲ್ಲಿ ಹಕ್ಕಿ ಜ್ವರದ ಸೋಂಕಿನಿಂದಲೇ ನವಿಲುಗಳು ಸಾವನ್ನಪ್ಪಿವೆ ಎಂದು ದೃಢಪಟ್ಟಿದೆ.
ಇದೀಗ ಜಿಲ್ಲೆಯ ಬೊಮ್ಮನಹಳ್ಳಿ ಗ್ರಾಮದ ಕೋಳಿ ಫಾರಂನಲ್ಲಿ ಏಕಾಕಾಲದಲ್ಲಿ ಸುಮಾರು 30 ಕೋಳಿಗಳು ಸಾವನ್ನಪ್ಪಿದ್ದು, ಈ ಘಟನೆ ಹಕ್ಕಿಜ್ವರದ ಅನುಮಾನಕ್ಕೆ ಕಾರಣವಾಗಿದೆ. ಪಶು ಸಂಗೋಪನಾ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಹೈ ಅಲರ್ಟ್ ಘೋಷಿಸಿದ್ದಾರೆ. ಕಲ್ಲಳ್ಳಿ, ಕೋಡಿಹಳ್ಳಿ, ಹುಣ್ಣೆನಹಳ್ಳಿ, ಬೊಮ್ಮನಹಳ್ಳಿ ಮತ್ತು ಬೈರಸಂದ್ರ ಪ್ರದೇಶದ ಜನರು ಹೆಚ್ಚು ಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.








