ಜಮ್ಮುವಿನ ಬಂಟಲಾಬ್ ಪ್ರದೇಶದಲ್ಲಿ ಶುಕ್ರವಾರ (ಮೇ 1) ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಕನಿಷ್ಠ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರನ್ನು ರಕ್ಷಿಸಲಾಗಿದೆ. ಘಟನೆಯ ಬೆನ್ನಲ್ಲೇ ತಕ್ಷಣದ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು.
ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಜಮ್ಮು ಮತ್ತು ಕಾಶ್ಮೀರ ಉಪಮುಖ್ಯಮಂತ್ರಿ ಸುರಿಂದರ್ ಚೌಧರಿ, ಅವಶೇಷಗಳ ಅಡಿಯಲ್ಲಿ ನಾಲ್ವರು ಕಾರ್ಮಿಕರು ಸಿಲುಕಿಕೊಂಡಿದ್ದನ್ನು ಖಚಿತಪಡಿಸಿದ್ದಾರೆ. “ಈ ಘಟನೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿರುವುದು ನನಗೆ ತೀವ್ರ ಆಘಾತ ತಂದಿದೆ. ಸಿಲುಕಿಕೊಂಡಿದ್ದ ನಾಲ್ವರಲ್ಲಿ ಮೂವರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಸುರಕ್ಷಿತವಾಗಿ ಬದುಕುಳಿದಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಘಟನೆಯನ್ನು ಎಷ್ಟು ಖಂಡಿಸಿದರೂ ಸಾಲದು,” ಎಂದು ಅವರು ತಿಳಿಸಿದ್ದಾರೆ.
ದುರಂತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, “ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಒಬ್ಬರನ್ನು ಅಟ್ಯಾಚ್ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದ್ದು, ಸಂಬಂಧಪಟ್ಟ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ (Blacklist) ಸೇರಿಸಲಾಗುವುದು,” ಎಂದು ಚೌಧರಿ ಹೇಳಿದ್ದಾರೆ.








