ಬೆಂಗಳೂರು: ರಾಜಧಾನಿಯಲ್ಲಿ ಬುಧವಾರ ಸುರಿದ ಭಾರಿ ಮಳೆಯಿಂದಾಗಿ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಸಂಬಂಧಪಟ್ಟ ಕಾರ್ಯಪಾಲಕ ಇಂಜಿನಿಯರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲು ಸೂಚಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರುಗಳೊಂದಿಗೆ ಇಂದು ನಡೆಸಿದ ಸಭೆಯಲ್ಲಿ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಚಾಟಿ ಬೀಸಿದರು. ಸಭೆಯ ಪ್ರಮುಖ ಮುಖ್ಯಾಂಶಗಳು ಇಂತಿವೆ:
ಕರ್ತವ್ಯಲೋಪಕ್ಕೆ ಕ್ರಮ ಮತ್ತು ನೋಟಿಸ್:
-
ಇಂಜಿನಿಯರ್ ಅಮಾನತು: ಗೋಡೆ ಕುಸಿತಕ್ಕೆ ಕಾರಣವಾದ ನಿರ್ಲಕ್ಷ್ಯಕ್ಕಾಗಿ ಕಾರ್ಯಪಾಲಕ ಇಂಜಿನಿಯರ್ ಅಮಾನತುಗೊಳಿಸಿ ನೋಟಿಸ್ ಜಾರಿ ಮಾಡಲು ಆದೇಶಿಸಿದ್ದಾರೆ.
-
ಆಸ್ಪತ್ರೆ ಮುಖ್ಯಸ್ಥರಿಗೆ ನೋಟಿಸ್: ಗೋಡೆಗೆ ಹಾನಿಯಾಗುವಂತೆ ಮಣ್ಣು ಸುರಿದಿದ್ದನ್ನು ಗಮನಿಸದ ಆಸ್ಪತ್ರೆ ಮುಖ್ಯಸ್ಥರ ವಿರುದ್ಧ ಕಿಡಿಕಾರಿದ ಸಿಎಂ, ಇದು ಮೇಲ್ನೋಟಕ್ಕೆ ಕರ್ತವ್ಯಲೋಪದಂತೆ ಕಾಣುತ್ತಿದೆ. ಈ ಕೂಡಲೇ ಅವರಿಗೆ ನೋಟಿಸ್ ನೀಡಬೇಕು ಎಂದು ಸೂಚಿಸಿದ್ದಾರೆ.
ಪರಿಹಾರ ಮತ್ತು ಚಿಕಿತ್ಸೆ:
-
ಮಳೆಯಿಂದಾಗಿ ಮೃತಪಟ್ಟ ಏಳು ಜನರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.
-
ಘಟನೆಯಲ್ಲಿ ಗಾಯಗೊಂಡವರಿಗೆ ಸರ್ಕಾರಿ ವೆಚ್ಚದಲ್ಲಿ ಉಚಿತ ಚಿಕಿತ್ಸೆ ನೀಡುವಂತೆ ಸಿಎಂ ನಿರ್ದೇಶನ ನೀಡಿದ್ದಾರೆ.
ಮಳೆ ಹಾನಿ ಮತ್ತು ಮುಂಜಾಗ್ರತಾ ಕ್ರಮಗಳು:
-
ತುರ್ತು ಕ್ರಮ: ನಗರದಲ್ಲಿ ಮಳೆಯಿಂದಾಗಿ 250ಕ್ಕೂ ಹೆಚ್ಚು ಮರಗಳು ಬಿದ್ದಿದ್ದು, ರಸ್ತೆಯಲ್ಲಿ ಬಿದ್ದಿರುವ ಕಸ ಹಾಗೂ ಮರದ ರೆಂಬೆಗಳನ್ನು ತಕ್ಷಣವೇ ತೆರವುಗೊಳಿಸಲು ಆದೇಶಿಸಲಾಗಿದೆ.
-
ಗುಂಡಿ ಮುಚ್ಚಲು ಸೂಚನೆ: ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳನ್ನು ಕೂಡಲೇ ಮುಚ್ಚಲು ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
-
ಅಪಾಯಕಾರಿ ಮರಗಳು: ಮುಂಗಾರು ಆರಂಭಕ್ಕೂ ಮುನ್ನವೇ ಐದೂ ವಲಯಗಳ ಆಯುಕ್ತರು ಎಚ್ಚೆತ್ತುಕೊಳ್ಳಬೇಕು. ಒಣಗಿರುವ ಮತ್ತು ಅಪಾಯಕಾರಿ ಮರಗಳ ರೆಂಬೆಗಳನ್ನು ಕತ್ತರಿಸಬೇಕು.
ಪ್ರವಾಹ ತಡೆಗೆ ಕಟ್ಟುನಿಟ್ಟಿನ ಸೂಚನೆ:
-
ರಾಜಕಾಲುವೆ ಹೂಳೆತ್ತುವುದು: ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ರಾಜಕಾಲುವೆಗಳಲ್ಲಿ ಹೂಳು ತೆಗೆದು ಪ್ರವಾಹ ಉಂಟಾಗದಂತೆ ನೋಡಿಕೊಳ್ಳಬೇಕು.
-
ಅಂಡರ್ ಪಾಸ್ ಸುರಕ್ಷತೆ: ಅಂಡರ್ ಪಾಸ್‌ಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ನೀರು ನಿಂತಿರುವ ಅಂಡರ್ ಪಾಸ್‌ಗಳಿಗೆ ಜನರು ಪ್ರವೇಶಿಸದಂತೆ ತಕ್ಷಣವೇ ಬ್ಯಾರಿಕೇಡ್ ಹಾಕಬೇಕು ಎಂದು ಸಿಎಂ ಸಿದ್ಧರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ಮಳೆಯ ಅನಾಹುತಗಳನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ಯಾವುದೇ ರೀತಿಯ ನಿರ್ಲಕ್ಷ್ಯ ತೋರಬಾರದು ಎಂದು ಈ ಸಂದರ್ಭದಲ್ಲಿ ಅವರು ಎಚ್ಚರಿಕೆ ನೀಡಿದರು.
BIG NEWS: ಬೇಸೂರು ಅಣು ವಿದ್ಯುತ್ ಸ್ಥಾವರಕ್ಕೆ ತೀವ್ರ ವಿರೋಧ: ಮೇ.7ರಂದು ಸಾಗರದಲ್ಲಿ ಬೃಹತ್ ಪ್ರತಿಭಟನೆ








