ಬೆಂಗಳೂರು: ಬುಧವಾರ ಬೆಂಗಳೂರಿನಾದ್ಯಂತ ಅಬ್ಬರಿಸಿದ ಆಲಿಕಲ್ಲು ಸಹಿತ ಮಳೆಯು ಮಹಾ ದುರಂತವನ್ನೇ ಸೃಷ್ಟಿಸಿದ್ದು, ನಗರದ ವಿವಿಧ ಭಾಗಗಳಲ್ಲಿ ಸಂಭವಿಸಿದ ಮಳೆ ಸಂಬಂಧಿತ ಅವಘಡಗಳಿಗೆ ಸುಮಾರು 10 ಮಂದಿ ಬಲಿಯಾಗಿದ್ದಾರೆ. ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಏಳು ಜನರು ಮೃತಪಟ್ಟರೆ, ವಿದ್ಯುತ್ ಸ್ಪರ್ಶ ಮತ್ತು ಮನೆ ಕುಸಿತದಂತಹ ಘಟನೆಗಳಿಂದ ಇನ್ನೂ ಮೂವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಬೆನ್ನಲ್ಲೇ ಇಂದೂ ಸಹ ಬೆಂಗಳೂರಲ್ಲಿ ವರುಣ ಆರ್ಭಟಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಕೂಡ ಕೂಡ ಬೆಂಗಳೂರಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದ್ದು, ಮೇ 1ರವರೆಗೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೇಸಿಗೆಗೆ ಬೆಂದಿದ್ದ ಬೆಂಗಳೂರಿಗರಿಗೆ ಬುಧವಾರ ಮಳೆರಾಯ ತಂಪೆರೆದಿದ್ದಾನೆ. ಹಲವು ಅವಘಡಗಳ ಜೊತೆ ಭೀಕರ ಮಳೆ 10 ಜನರ ಪ್ರಾಣವನ್ನೂ ಕಸಿದಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಗೋಡೆ ಕುಸಿದು 7 ಜನ ಮೃತಪಟ್ಟಿದ್ದು, ಇನ್ನೂ ಮೂವರು ಪ್ರತ್ಯೇಕ ಘಟನೆಗಳಲ್ಲಿ ಜೀವ ಕಳೆದುಕೊಂಡಿದ್ದಾರೆ.
ಬುಧವಾರ ಸುರಿದ ಒಂದೇ ಒಂದು ಧಾರಾಕಾರ ಮಳೆಗೆ ಬೆಂಗಳೂರಿನ ಮರಗಳು ಧರೆಗುರಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. 170ಕ್ಕೂ ಅಧಿಕ ಮರಗಳು ಧರೆಗುರುಳಿದ್ದು, 408 ಮರದ ಕೊಂಬೆಗಳು ಮುರಿದು ಬಿದ್ದಿವೆ. 5 ಪಾಲಿಕೆಗಳ ವ್ಯಾಪ್ತಿಯಲ್ಲಿ 68 ಕಡೆ ಜಲಾವೃತವಾಗಿದೆ. 25 ವರ್ಷಗಳ ಬಳಿಕ ಏಪ್ರಿಲ್‌ನಲ್ಲಿ ದಾಖಲೆಯ ಮಳೆಯಾಗಿದೆ.








