ವಾಷಿಂಗ್ಟನ್: ಜಾಗತಿಕ ಸಂಘರ್ಷಗಳ ಅಂತ್ಯಕ್ಕೆ ದಾರಿ ಹುಡುಕುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಮಹತ್ವದ ದೂರವಾಣಿ ಮಾತುಕತೆ ನಡೆದಿದೆ. ಕ್ರೆಮ್ಲಿನ್ (ರಷ್ಯಾ ಅಧ್ಯಕ್ಷೀಯ ಭವನ) ಈ ಸುದ್ದಿಯನ್ನು ಅಧಿಕೃತವಾಗಿ ಖಚಿತಪಡಿಸಿದ್ದು, ಉಕ್ರೇನ್ ಯುದ್ಧದ ಪರಿಸ್ಥಿತಿ ಮತ್ತು ಇರಾನ್ ಕುರಿತಾದ ರಾಜತಾಂತ್ರಿಕ ಬಿಕ್ಕಟ್ಟಿನ ಬಗ್ಗೆ ಉಭಯ ನಾಯಕರು ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಟ್ರಂಪ್ ಮತ್ತು ಪುಟಿನ್ ನಡುವಿನ ಈ ಸಂಭಾಷಣೆಯಲ್ಲಿ ಉಕ್ರೇನ್ ಸಂಘರ್ಷವನ್ನು ಶಾಂತಿಯುತವಾಗಿ ಕೊನೆಗೊಳಿಸುವ ನಿಟ್ಟಿನಲ್ಲಿ ಪ್ರಾಥಮಿಕ ಮಾತುಕತೆ ನಡೆದಿದೆ. ಯುರೋಪ್‌ನಲ್ಲಿ ಶಾಂತಿ ಸ್ಥಾಪಿಸಲು ಅಮೆರಿಕ ಮತ್ತು ರಷ್ಯಾ ನಡುವಿನ ಸಹಕಾರ ಅಗತ್ಯ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.
ಇರಾನ್‌ನ ಇತ್ತೀಚಿನ ನಡೆಯಿಂದ ಪಶ್ಚಿಮ ಏಷ್ಯಾದಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನತೆಯ ಕುರಿತೂ ನಾಯಕರು ಚರ್ಚಿಸಿದರು. ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದನ್ನು ತಡೆಯಲು ಅಮೆರಿಕ ಕೈಗೊಳ್ಳಲಿರುವ ಕಠಿಣ ಕ್ರಮಗಳ ಬಗ್ಗೆ ಟ್ರಂಪ್ ರಷ್ಯಾಕ್ಕೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಜೋ ಬೈಡನ್ ಅವರ ಅವಧಿಯಲ್ಲಿ ಹದಗೆಟ್ಟಿದ್ದ ಅಮೆರಿಕ ಮತ್ತು ರಷ್ಯಾ ಸಂಬಂಧವನ್ನು ಮತ್ತೆ ಹಳಿಗೆ ತರುವ ನಿಟ್ಟಿನಲ್ಲಿ ಮುಕ್ತವಾಗಿ ಚರ್ಚಿಸಲು ಇಬ್ಬರೂ ನಾಯಕರು ಒಮ್ಮತ ವ್ಯಕ್ತಪಡಿಸಿದ್ದಾರೆ.








