ಬೆಂಗಳೂರು: ರಾಜಧಾನಿಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ರಣಮಳೆಗೆ ಮತ್ತೊಂದು ಬಲಿಯಾಗಿದೆ. ಮೈಸೂರು ರಸ್ತೆಯ ಕಸ್ತೂರಿಬಾಯಿ ನಗರದಲ್ಲಿ ಗಾಳಿ ಮಳೆಗೆ ಗೋಡೌನ್ನ ಸಿಮೆಂಟ್ ಶೀಟ್ಗಳು ಹಾರಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ಘಟನೆಯ ವಿವರ:
ಮೈಸೂರು ರಸ್ತೆ ಸಮೀಪದ ಕಸ್ತೂರಿಬಾಯಿ ನಗರದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಮಂಜು (35) ಎಂದು ಗುರುತಿಸಲಾಗಿದೆ. ಭಾರಿ ಗಾಳಿ ಮಳೆ ಬರುತ್ತಿದ್ದ ಸಮಯದಲ್ಲಿ ಮಂಜು ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿದ್ದರು. ಈ ವೇಳೆ ಪಕ್ಕದಲ್ಲಿದ್ದ ಗೋಡೌನ್ನ ಸಿಮೆಂಟ್ ಶೀಟ್ಗಳು ಗಾಳಿಯ ವೇಗಕ್ಕೆ ಹಾರಿ ಬಂದು ಇವರ ಮನೆಯ ಮೇಲೆ ಬಿದ್ದಿವೆ.
ಕುಟುಂಬದವರ ಕಣ್ಣೆದುರೇ ದುರಂತ:
ಮನೆಯೊಳಗೆ ಸುರಕ್ಷಿತವಾಗಿದ್ದೇವೆ ಎಂದು ಭಾವಿಸಿದ್ದ ಕುಟುಂಬಕ್ಕೆ ಈ ಘಟನೆ ಬರಸಿಡಿಲು ಬಡಿದಂತಾಗಿದೆ. ಮನೆಯವರ ಕಣ್ಣೆದುರೇ ಶೀಟ್ಗಳು ಬಿದ್ದಿದ್ದರಿಂದ ಮಂಜು ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಬೆಂಗಳೂರಲ್ಲಿ ಭಾರೀ ಮಳೆಗೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಮೂವರು ಮಕ್ಕಳು ಸೇರಿ 7 ಮಂದಿ ಬಲಿ
ರಾಜಧಾನಿಯಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಈ ಭೀಕರ ಮಳೆಗೆ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ನಿನ್ನೆ ಸಂಜೆ ದಿಢೀರ್ ಕುಸಿದು ಬಿದ್ದಿದೆ. ಗೋಡೆಯ ಅವಶೇಷಗಳಡಿ ಸಿಲುಕಿ ಮೂವರು ಮಕ್ಕಳು ಸೇರಿದಂತೆ 7 ಮಂದಿ ಬಲಿಯಾಗಿದ್ದಾರೆ.








