ಶಿವಮೊಗ್ಗ : ಪತಿಯ ಅನೈತಿಕ ಸಂಬಂಧ ಹಾಗೂ ನಿರಂತರ ದೈಹಿಕ-ಮಾನಸಿಕ ಕಿರುಕುಳಕ್ಕೆ ಬೇಸತ್ತ ಪತ್ನಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಹೊಸವೀರಾಪುರ ಗ್ರಾಮದ ಮೂಲದ ಮಂಜುಳಾ (38) ಮೃತ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಮೃತಳ ತಾಯಿ ನೀಡಿದ ದೂರಿನ ಆಧಾರದ ಮೇಲೆ ಸೊರಬ ಪೊಲೀಸರು ಬಿಜೆಪಿ ಮುಖಂಡ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷ ಪ್ರಭು ಮೇಸ್ತ್ರಿಯನ್ನು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆ:
ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿ ತನ್ನ ಹಾರ್ಡ್ವೇರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರ ಮಂಜುಳಾ ಅವರಿಗೆ ತಿಳಿದು ಮನೆಯಲ್ಲಿ ಕಲಹ ಶುರುವಾಗಿತ್ತು. ಪತಿಯ ನಡವಳಿಕೆಯನ್ನು ತಿದ್ದಲು ಕುಟುಂಬದ ಹಿರಿಯರು ಮತ್ತು ಸಂಬಂಧಿಕರು ಹಲವು ಬಾರಿ ಸಂಧಾನ ನಡೆಸಿ ಬುದ್ಧಿಮಾತು ಹೇಳಿದ್ದರೂ, ಪ್ರಭು ಮಾತ್ರ ತನ್ನ ಸಂಬಂಧವನ್ನು ಮುಂದುವರಿಸಿದ್ದ ಎನ್ನಲಾಗಿದೆ.
ಇದೇ ವಿಚಾರವಾಗಿ ಮಂಜುಳಾ ಅವರಿಗೆ ಪ್ರಭು ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ಮಂಜುಳಾ, ಮನೆಯ ಹಿಂಭಾಗದ ಮರದ ತೊಲೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತಳ ತಾಯಿ ಶೋಭಾ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಸೊರಬ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.








