ಸಮೂಹ ಸಂವಹನ ಅಥವಾ ಜನರೊಂದಿಗೆ ಬೆರೆಯುವುದು ನಮಗೆ ಖುಷಿ ನೀಡಬೇಕು. ಆದರೆ ಕೆಲವೊಮ್ಮೆ ಅದೇ ಸಂವಹನ ನಮ್ಮನ್ನು ಅತಿಯಾದ ಸುಸ್ತಿಗೆ ದೂಡುತ್ತದೆ. ಇದನ್ನು ಮನೋವಿಜ್ಞಾನದಲ್ಲಿ ‘ಸೋಷಿಯಲ್ ಬರ್ನ್‌ಔಟ್’ (Social Burnout) ಎನ್ನಲಾಗುತ್ತದೆ. ಅಂದರೆ ಸಾಮಾಜಿಕವಾಗಿ ಬೆರೆಯುವುದರಿಂದ ಉಂಟಾಗುವ ಮಾನಸಿಕ ಆಯಾಸ.
ಒಬ್ಬ ವ್ಯಕ್ತಿಯು ಅತಿಯಾದ ಸಾಮಾಜಿಕ ಸಂಪರ್ಕದಿಂದ (ಪಾರ್ಟಿಗಳು, ಮೀಟಿಂಗ್‌ಗಳು ಅಥವಾ ಅತಿಯಾದ ಫೋನ್ ಕರೆಗಳು) ಮಾನಸಿಕವಾಗಿ ಮತ್ತು ದೈಹಿಕವಾಗಿ ಸಂಪೂರ್ಣವಾಗಿ ಬರಿದಾದಂತೆ ಅನುಭವಿಸುವುದೇ ಸೋಷಿಯಲ್ ಬರ್ನ್‌ಔಟ್. ಇದು ಕೇವಲ ಅಂತರ್ಮುಖಿ (Introverts) ಜನರಿಗೆ ಮಾತ್ರವಲ್ಲ, ಅತಿ ಹೆಚ್ಚು ಜನರೊಂದಿಗೆ ಬೆರೆಯುವವರಿಗೂ ಕಾಡಬಹುದು.
ಜನರೊಂದಿಗೆ ಮಾತನಾಡಿದ ನಂತರ ವಿಪರೀತ ಸುಸ್ತು ಮತ್ತು ತಲೆನೋವು ಕಾಣಿಸಿಕೊಳ್ಳುವುದು.ಯಾರೂ ಇಲ್ಲದ ಕಡೆ ಸೈಲೆಂಟ್ ಆಗಿ ಇರಬೇಕು ಅನ್ನಿಸುವುದು.ಸಣ್ಣ ಪುಟ್ಟ ವಿಷಯಗಳಿಗೂ ಕೋಪ ಅಥವಾ ಕಿರಿಕಿರಿ ಉಂಟಾಗುವುದು.
ಸಂಭಾಷಣೆಯ ಮಧ್ಯೆ ಏಕಾಗ್ರತೆ ಕಳೆದುಕೊಳ್ಳುವುದು.
ಆತಂಕ: ಮುಂದಿನ ಸಾಮಾಜಿಕ ಕಾರ್ಯಕ್ರಮಕ್ಕೆ ಹೋಗಲು ಭಯ ಅಥವಾ ಆತಂಕವಾಗುವುದು.
ಕಾರಣಗಳೇನು? (Causes):
ದೀರ್ಘಕಾಲದ ಸಾಮಾಜಿಕ ಒಡನಾಟ: ವಿರಾಮವಿಲ್ಲದೆ ಸತತವಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು.ಬೇರೆಯವರ ಮುಂದೆ ನಾವು ಚೆನ್ನಾಗಿದ್ದೇವೆ ಎಂದು ತೋರಿಸಿಕೊಳ್ಳಲು ಮಾಡುವ ‘ನಕಲಿ’ ನಗು ಅಥವಾ ನಡವಳಿಕೆ ಮೆದುಳಿಗೆ ಅತಿಯಾದ ಒತ್ತಡ ನೀಡುತ್ತದೆ.
ಸೋಷಿಯಲ್ ಮೀಡಿಯಾ: ದಿನವಿಡೀ ಆನ್‌ಲೈನ್‌ನಲ್ಲಿ ಜನರೊಂದಿಗೆ ಸಂಪರ್ಕದಲ್ಲಿರುವುದು ಕೂಡ ಮೆದುಳನ್ನು ದಣಿಸುತ್ತದೆ.
ಗಡಿಗಳಿಲ್ಲದಿರುವುದು: ‘ಇಲ್ಲ’ ಎಂದು ಹೇಳಲು ಸಾಧ್ಯವಾಗದೆ ಎಲ್ಲಾ ಕಾರ್ಯಕ್ರಮಗಳಿಗೂ ಒಪ್ಪಿಗೆ ನೀಡುವುದು.
ಪರಿಹಾರವೇನು?
’ನೋ’ ಹೇಳಲು ಕಲಿಯಿರಿ: ನಿಮಗೆ ಮನಸ್ಸಿಲ್ಲದಿದ್ದರೆ ಕಾರ್ಯಕ್ರಮಗಳಿಗೆ ಹೋಗುವುದನ್ನು ನಿರಾಕರಿಸಿ.
ಡಿಜಿಟಲ್ ಡಿಟಾಕ್ಸ್: ಮೊಬೈಲ್ ಮತ್ತು ಸೋಷಿಯಲ್ ಮೀಡಿಯಾದಿಂದ ಸ್ವಲ್ಪ ಸಮಯ ದೂರವಿರಿ.
ಸ್ವಯಂ ಆರೈಕೆ (Self-care): ನಿಮಗಾಗಿ ಸಮಯ ಮೀಸಲಿಡಿ, ಸಂಗೀತ ಕೇಳುವುದು ಅಥವಾ ನೆಚ್ಚಿನ ಹವ್ಯಾಸದಲ್ಲಿ ತೊಡಗಿ.








