ಲಕ್ನೋ: ಮುಖದ ಮೇಲಿನ ಕೂದಲಿನ (Facial Hair) ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೀಳುಮಟ್ಟದ ಟ್ರೋಲ್‌ಗೆ ಒಳಗಾಗಿದ್ದ ಉತ್ತರ ಪ್ರದೇಶದ ಸಾಧಕಿ ಪ್ರಾಚಿ ನಿಗಮ್, ಈಗ ಪಿಯುಸಿ (Class 12) ಫಲಿತಾಂಶದಲ್ಲೂ ಭರ್ಜರಿ ಅಂಕ ಗಳಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಹತ್ತನೇ ತರಗತಿಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದಿದ್ದ ಪ್ರಾಚಿ, ಇದೀಗ 12ನೇ ತರಗತಿ ಪರೀಕ್ಷೆಯಲ್ಲಿ ಶೇ. 91.2 ಅಂಕಗಳನ್ನು ಪಡೆಯುವ ಮೂಲಕ ತನ್ನ ಬುದ್ಧಿವಂತಿಕೆ ಮತ್ತು ಏಕಾಗ್ರತೆಯನ್ನು ಸಾಬೀತುಪಡಿಸಿದ್ದಾರೆ.
ಕಳೆದ ವರ್ಷ ಯುಪಿ ಬೋರ್ಡ್‌ನ 10ನೇ ತರಗತಿ ಫಲಿತಾಂಶ ಪ್ರಕಟವಾದಾಗ ಪ್ರಾಚಿ ನಿಗಮ್ ಟಾಪರ್ ಆಗಿ ಹೊರಹೊಮ್ಮಿದ್ದರು. ಆದರೆ, ಅವರ ಸಾಧನೆಯನ್ನು ಸಂಭ್ರಮಿಸುವ ಬದಲು, ಅವರ ಮುಖದ ಮೇಲಿನ ಕೂದಲನ್ನು ಕಂಡು ನೆಟ್ಟಿಗರು ಅಮಾನವೀಯವಾಗಿ ಟ್ರೋಲ್ ಮಾಡಿದ್ದರು. ಈ ಘಟನೆ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು.
ನಿಂದನೆಗಳಿಗೆ ಎದೆಗುಂದದ ಪ್ರಾಚಿ, ತನ್ನ ಸಂಪೂರ್ಣ ಗಮನವನ್ನು ವಿದ್ಯಾಭ್ಯಾಸದ ಮೇಲೆ ಕೇಂದ್ರೀಕರಿಸಿದ್ದರು. ತನಗೆ ಎದುರಾದ ಅಪಹಾಸ್ಯವನ್ನೇ ಮೆಟ್ಟಿಲಾಗಿ ಮಾಡಿಕೊಂಡ ಅವರು, ಈಗ 12ನೇ ತರಗತಿಯಲ್ಲೂ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಒಟ್ಟು 500 ಅಂಕಗಳಿಗೆ 456 ಅಂಕಗಳನ್ನು (91.2%) ಪಡೆಯುವ ಮೂಲಕ ವಿಜ್ಞಾನ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.








