ದುಬೈ: ಜಾಗತಿಕವಾಗಿ ಉದ್ವಿಗ್ನ ಪರಿಸ್ಥಿತಿ ಇರುವ ಹಾರ್ಮುಜ್ ಜಲಸಂಧಿಯ (Strait of Hormuz) ಸಮೀಪ ಚಲಿಸುತ್ತಿದ್ದ ‘ಎಂಟಿ ಚಿರೋನ್ 7’ (MT Chiron 7) ಎಂಬ ತೈಲ ಟ್ಯಾಂಕರ್ ಹಡಗಿನ ಮೇಲೆ ಶೆಲ್ ತುಣುಕುಗಳು (Shrapnel) ಅಪ್ಪಳಿಸಿದ ಪರಿಣಾಮ ಇಬ್ಬರು ಭಾರತೀಯ ಸಿಬ್ಬಂದಿ ಗಾಯಗೊಂಡಿದ್ದಾರೆ. ಶನಿವಾರ ನಡೆದ ಈ ಘಟನೆಯನ್ನು ಹಡಗು ನಿರ್ದೇಶನಾಲಯವು ಸೋಮವಾರ ಖಚಿತಪಡಿಸಿದೆ.
ಗಾಯಗೊಂಡವರನ್ನು ಅಂಕಿತ ಕುಮಾರ್ ಮತ್ತು ಸಾಗರ್ ಚಂದ್ ಎಂದು ಗುರುತಿಸಲಾಗಿದೆ. ಇವರು ಹಡಗಿನ ಬ್ರಿಡ್ಜ್ (ಚಾಲನಾ ಕೊಠಡಿ) ಭಾಗದಲ್ಲಿದ್ದಾಗ ಸ್ಫೋಟದ ಚೂರುಗಳು ತಗುಲಿ ಸಣ್ಣಪುಟ್ಟ ಗಾಯಗಳಾಗಿವೆ. ಇವರ ಜೊತೆಗೆ ಈಜಿಪ್ಟ್ ಮೂಲದ ಓರ್ವ ವ್ಯಕ್ತಿಗೂ ಗಾಯಗಳಾಗಿವೆ.
ಹಡಗಿನಲ್ಲಿದ್ದ ಒಟ್ಟು 24 ಸಿಬ್ಬಂದಿಗಳ ಪೈಕಿ 17 ಮಂದಿ ಭಾರತೀಯರು. ಸದ್ಯ ಎಲ್ಲಾ ಸಿಬ್ಬಂದಿಗಳು ಸುರಕ್ಷಿತವಾಗಿದ್ದು, ಹಡಗು ತನ್ನ ಮುಂದಿನ ಪ್ರಯಾಣವನ್ನು ಶಾರ್ಜಾದತ್ತ ಮುಂದುವರಿಸಿದೆ.
ಅಮೆರಿಕ ಮತ್ತು ಇರಾನ್ ನಡುವಿನ ತಿಕ್ಕಾಟದಿಂದಾಗಿ ಈ ಪ್ರದೇಶದಲ್ಲಿ ನೌಕಾ ಸಂಘರ್ಷ ತೀವ್ರಗೊಂಡಿದೆ. ಈ ಹಡಗನ್ನೇ ಗುರಿಯಾಗಿಸಿ ದಾಳಿ ಮಾಡಲಾಗಿತ್ತೇ ಅಥವಾ ಬೇರೆ ದಾಳಿಯ ವೇಳೆ ಹಡಗಿಗೆ ಈ ಚೂರುಗಳು ತಗುಲಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಕಳೆದ ಕೆಲವು ವಾರಗಳಲ್ಲಿ ಭಾರತೀಯ ಸಿಬ್ಬಂದಿಗಳಿರುವ ಹಲವು ವಿದೇಶಿ ಹಡಗುಗಳ ಮೇಲೆ ದಾಳಿ ನಡೆದಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಪ್ರದೇಶದಲ್ಲಿ ಸಂಚರಿಸುವ ಹಡಗುಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.








