ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಐಪಿಎಲ್ ಕ್ರೇಜ್ ನಡುವೆ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಜಾಲದ ಮೇಲೆ ಪೊಲೀಸರು ಸತತ ದಾಳಿ ನಡೆಸಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಒಟ್ಟು 17 ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು, 24 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ 16 ಹಾಗೂ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ. ಬಂಧಿತರಿಂದ ಒಟ್ಟು 37 ಐಪಿಎಲ್ ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಸಿಬಿ ಪೊಲೀಸರು ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ಈ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.
ಮಫ್ತಿಯಲ್ಲಿ ಬಂದು ಬಲೆ ಬೀಸಿದ ಪೊಲೀಸರು:
ಕಳೆದ ಶುಕ್ರವಾರ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಟಿಕೆಟ್ ಮಾರಾಟ ಮಾಡುತ್ತಿದ್ದ 10 ಮಂದಿಯನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಟಿಕೆಟ್ ಖರೀದಿಸುವ ಗ್ರಾಹಕರಂತೆ ಮಫ್ತಿಯಲ್ಲಿ ಹೋಗಿ ಈ ದಂಧೆಕೋರರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಬಂಧಿತ ಪ್ರಮುಖ ಆರೋಪಿಗಳು:
ಪ್ರದೀಪ್, ಸಾಗರ್, ಕಿರಣ್, ಜೀವನ್, ಭರತೇಶ, ಶಶಿಕುಮಾರ್, ಸೋನು, ಮತ್ತು ಶ್ರೀಕಾಂತ್ ಸೇರಿದಂತೆ 10 ಮಂದಿ ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.
ಕಾಂಪ್ಲಿಮೆಂಟರಿ ಟಿಕೆಟ್‌ಗಳ ದುರುಪಯೋಗ:
ವಿಶೇಷವೆಂದರೆ, ಕೆ.ಎಸ್.ಸಿ.ಎ. (KSCA) ಸದಸ್ಯರಿಗೆ ನೀಡಲಾಗಿದ್ದ ‘ಕಾಂಪ್ಲಿಮೆಂಟರಿ’ (ಉಚಿತ) ಟಿಕೆಟ್‌ಗಳನ್ನು ಸಹ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಈ ಟಿಕೆಟ್‌ಗಳು ಆರೋಪಿಗಳ ಕೈಗೆ ಹೇಗೆ ಸೇರಿದವು ಮತ್ತು ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳಲ್ಲಿ 5 ಲೀಗ್ ಪಂದ್ಯಗಳು ನಡೆದಿದ್ದು, ಪ್ರತಿ ಪಂದ್ಯದ ವೇಳೆಯೂ ಇಂತಹ ಅಕ್ರಮ ತಡೆಯಲು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು.








