ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಎರಡನೇ ಹಾಗೂ ನಿರ್ಣಾಯಕ ಹಂತದ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದೆ. ಸೋಮವಾರ ಸಂಜೆ ಪ್ರಚಾರದ ಅಬ್ಬರಕ್ಕೆ ತೆರೆ ಬಿದ್ದಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಅಂತಿಮ ಹಂತದ ಮತದೇಟು ನಡೆಸಿದರು. ಏಪ್ರಿಲ್ 29 ರಂದು ಉಳಿದ 142 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಮೋದಿಯವರ ‘ವಿಕಸಿತ ಬಂಗಾಳ’ದ ಭರವಸೆ: ಬಂಗಾಳದ ಜನತೆಗೆ ಬಹಿರಂಗ ಪತ್ರ ಬರೆದ ಪ್ರಧಾನಿ ಮೋದಿ, “ಬಂಗಾಳದಲ್ಲಿ ಈಗ ಭಯದ ಆಡಳಿತವಿದೆ, ಇದನ್ನು ಬದಲಿಸಿ ಅಭಿವೃದ್ಧಿಯ ಪರ್ವ ಆರಂಭಿಸಲು ಬಿಜೆಪಿಗೆ ಮತ ನೀಡಿ” ಎಂದು ಮನವಿ ಮಾಡಿದರು. ಮೇ 4ರ ಫಲಿತಾಂಶದ ನಂತರ ಬಿಜೆಪಿಯ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಕೋಲ್ಕತ್ತಾದಲ್ಲಿ ಸುಮಾರು 6 ಕಿಲೋಮೀಟರ್ ಉದ್ದದ ಬೃಹತ್ ಪಾದಯಾತ್ರೆ ನಡೆಸಿದ ಮಮತಾ ಬ್ಯಾನರ್ಜಿ, ಬಿಜೆಪಿಯ ತಂತ್ರಗಳು ಬಂಗಾಳದಲ್ಲಿ ನಡೆಯುವುದಿಲ್ಲ ಎಂದು ಗುಡುಗಿದರು. “ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ, ಆದರೆ ನಾವು ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೇವೆ” ಎಂದು ಟಿಎಂಸಿ ಪರ ಬ್ಯಾಟಿಂಗ್ ಮಾಡಿದರು.
ಎರಡನೇ ಹಂತದಲ್ಲಿ ಕೋಲ್ಕತ್ತಾ ಸೇರಿದಂತೆ ದಕ್ಷಿಣ ಬಂಗಾಳದ ಜಿಲ್ಲೆಗಳಲ್ಲಿ ಹೆಚ್ಚು ಮತದಾನ ನಡೆಯಲಿದ್ದು, ಈ ಭಾಗವು ಟಿಎಂಸಿಯ ಭದ್ರಕೋಟೆಯಾಗಿದೆ. ಇದನ್ನು ಭೇದಿಸಲು ಬಿಜೆಪಿ ಅಮಿತ್ ಶಾ ಮತ್ತು ಮೋದಿ ನೇತೃತ್ವದಲ್ಲಿ ಮಿಂಚಿನ ಸಂಚಾರ ನಡೆಸಿದೆ.








