ಮ್ಯಾಡ್ರಿಡ್: ಫಿಫಾ ವಿಶ್ವಕಪ್ 2026ಕ್ಕೆ ಕೆಲವೇ ವಾರಗಳು ಬಾಕಿ ಇರುವಾಗ, ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಕಿಲಿಯನ್ ಎಂಬಪ್ಪೆ (Kylian Mbappe) ಗಾಯಗೊಂಡಿದ್ದಾರೆ. ಸೋಮವಾರ (ಏಪ್ರಿಲ್ 27, 2026) ರಿಯಲ್ ಮ್ಯಾಡ್ರಿಡ್ ಕ್ಲಬ್ ಈ ವಿಷಯವನ್ನು ಅಧಿಕೃತವಾಗಿ ದೃಢಪಡಿಸಿದ್ದು, ಇದು ಫ್ರಾನ್ಸ್ ರಾಷ್ಟ್ರೀಯ ತಂಡ ಮತ್ತು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಕಳೆದ ಶುಕ್ರವಾರ ರಿಯಲ್ ಬೆಟಿಸ್ ವಿರುದ್ಧ ನಡೆದ ಲಾ ಲಿಗಾ ಪಂದ್ಯದ ವೇಳೆ ಎಂಬಪ್ಪೆ ಅವರ ಎಡಗಾಲಿನ ಸ್ನಾಯು (Hamstring) ಸೆಳೆತಕ್ಕೊಳಗಾಗಿತ್ತು. ಪಂದ್ಯದ 80ನೇ ನಿಮಿಷದಲ್ಲಿ ನೋವಿನಿಂದ ಅವರು ಮೈದಾನದಿಂದ ಹೊರಬಂದಿದ್ದರು.
ಇಂದು ನಡೆದ ಸ್ಕ್ಯಾನಿಂಗ್ ಪರೀಕ್ಷೆಯಲ್ಲಿ ಎಂಬಪ್ಪೆ ಅವರ ಎಡಗಾಲಿನ ‘ಸೆಮಿಟೆಂಡಿನೋಸಸ್’ (Semitendinosus) ಸ್ನಾಯುವಿಗೆ ಗಾಯವಾಗಿರುವುದು ಪತ್ತೆಯಾಗಿದೆ.
ಈ ಗಾಯದ ಕಾರಣದಿಂದಾಗಿ ಅವರು ಮೇ 10ರಂದು ಬಾರ್ಸಿಲೋನಾ ವಿರುದ್ಧ ನಡೆಯಲಿರುವ ಪ್ರತಿಷ್ಠಿತ ‘ಎಲ್ ಕ್ಲಾಸಿಕೋ’ (El Clasico) ಪಂದ್ಯ ಸೇರಿದಂತೆ ರಿಯಲ್ ಮ್ಯಾಡ್ರಿಡ್ ತಂಡದ ಈ ಸೀಸನ್ನ ಉಳಿದ ಪಂದ್ಯಗಳಿಂದ ಹೊರಬೀಳುವ ಸಾಧ್ಯತೆಯಿದೆ.
ಜೂನ್ 11ರಿಂದ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೋದಲ್ಲಿ ಜಂಟಿಯಾಗಿ ನಡೆಯಲಿರುವ ವಿಶ್ವಕಪ್ಗೆ ಎಂಬಪ್ಪೆ ಲಭ್ಯವಿರುತ್ತಾರೆಯೇ ಎಂಬ ಪ್ರಶ್ನೆ ಈಗ ಎದ್ದಿದೆ.
ಸಾಮಾನ್ಯವಾಗಿ ಇಂತಹ ಗಾಯಗಳು ವಾಸಿಯಾಗಲು 3 ರಿಂದ 4 ವಾರಗಳ ವಿಶ್ರಾಂತಿ ಬೇಕಾಗುತ್ತದೆ. ವಿಶ್ವಕಪ್ ಆರಂಭಕ್ಕೆ ಸರಿ ಸುಮಾರು ಆರು ವಾರಗಳ ಕಾಲಾವಕಾಶ ಇರುವುದರಿಂದ, ಜೂನ್ 16 ರಂದು ನಡೆಯಲಿರುವ ಸೆನೆಗಲ್ ವಿರುದ್ಧದ ಫ್ರಾನ್ಸ್ನ ಮೊದಲ ಪಂದ್ಯಕ್ಕೆ ಅವರು ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.








