ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಕೇವಲ ಎರಡು ದಿನ ಬಾಕಿ ಇರುವಾಗ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿವೆ. ದಕ್ಷಿಣ 24 ಪರಗಣ ಜಿಲ್ಲೆಯ ಭಾಂಗರ್‌ನಲ್ಲಿರುವ ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತ ರಫಿಕುಲ್ ಇಸ್ಲಾಂ ಎಂಬುವವರ ನಿವಾಸದ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು 100 ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಭಾನುವಾರ (ಏಪ್ರಿಲ್ 26) ರಫಿಕುಲ್ ಇಸ್ಲಾಂ ಅವರ ನಿವಾಸ ಮತ್ತು ಹಿತ್ತಲಿನಲ್ಲಿ ಶೋಧ ನಡೆಸಿದರು. ಈ ವೇಳೆ ಚೀಲಗಳಲ್ಲಿ ಅಡಗಿಸಿಟ್ಟಿದ್ದ 100ಕ್ಕೂ ಹೆಚ್ಚು ಜೀವಂತ ಕಚ್ಚಾ ಬಾಂಬ್‌ಗಳು ಪತ್ತೆಯಾಗಿವೆ. ಇವುಗಳನ್ನು ನಂತರ ಬಾಂಬ್ ನಿಷ್ಕ್ರಿಯ ದಳದವರು ಸುರಕ್ಷಿತವಾಗಿ ವಿಲೇವಾರಿ ಮಾಡಿದ್ದಾರೆ.
ಮತದಾನದ ಹೊಸ್ತಿಲಲ್ಲೇ ಇಷ್ಟು ದೊಡ್ಡ ಪ್ರಮಾಣದ ಬಾಂಬ್‌ಗಳು ಪತ್ತೆಯಾಗಿರುವುದು ಚುನಾವಣಾ ಆಯೋಗವನ್ನು ಕೆರಳಿಸಿದೆ. ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವಹಿಸುವಂತೆ ಆಯೋಗ ಸೂಚಿಸಿದೆ. ಅಲ್ಲದೆ, ಕರ್ತವ್ಯ ಲೋಪ ಎಸಗುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಘಟನೆಯು ಟಿಎಂಸಿ ಮತ್ತು ಎದುರಾಳಿ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಮತದಾರರಲ್ಲಿ ಭಯ ಹುಟ್ಟಿಸಲು ಮತ್ತು ಮತದಾನದ ದಿನ ಹಿಂಸಾಚಾರ ನಡೆಸಲು ಟಿಎಂಸಿ ಈ ಬಾಂಬ್‌ಗಳನ್ನು ಸಂಗ್ರಹಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಆದರೆ, ಟಿಎಂಸಿ ಈ ಆರೋಪವನ್ನು ನಿರಾಕರಿಸಿದ್ದು, ಇದು ಪಕ್ಷಕ್ಕೆ ಮಸಿ ಬಳಿಯಲು ನಡೆದ ಪಿತೂರಿ ಎಂದು ಹೇಳಿದೆ.








