ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂನ ಅತ್ಯಂತ ನಿಕಟವರ್ತಿ ಹಾಗೂ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲದ ಪ್ರಮುಖ ಸೂತ್ರಧಾರಿ ಸಲೀಂ ಡೋಲಾ (Salim Dola) ನನ್ನು ಟರ್ಕಿಯಲ್ಲಿ ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ಸುದೀರ್ಘ ಕಾಲದಿಂದ ತಲೆಮರೆಸಿಕೊಂಡಿದ್ದ ಈತನ ಬಂಧನಕ್ಕಾಗಿ ನಡೆದ ಭಾರಿ ಕಾರ್ಯಾಚರಣೆಯ ವಿಡಿಯೋ ಸೋರಿಕೆಯಾಗಿದ್ದು, ಡಿ-ಕಂಪನಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಸಲೀಂ ಡೋಲಾ ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಅತ್ಯಂತ ನಂಬಿಕಸ್ತ ವ್ಯಕ್ತಿಗಳಲ್ಲಿ ಒಬ್ಬ. ಭಾರತ ಮತ್ತು ಗಲ್ಫ್ ರಾಷ್ಟ್ರಗಳ ನಡುವಿನ ಅಕ್ರಮ ದಂಧೆಗಳನ್ನು ಈತನೇ ನಿಯಂತ್ರಿಸುತ್ತಿದ್ದ ಎನ್ನಲಾಗಿದೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಹಾಗೂ ಪಾಶ್ಚಿಮಾತ್ಯ ದೇಶಗಳಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಸರಬರಾಜು ಮಾಡುವ ಜಾಲದ ಮುಖ್ಯಸ್ಥನಾಗಿದ್ದ ಈತ, ಎನ್‌ಸಿಬಿ (NCB) ಮತ್ತು ಎನ್ಐಎ (NIA) ತನಿಖಾ ಸಂಸ್ಥೆಗಳಿಗೆ ಮೋಸ್ಟ್ ವಾಂಟೆಡ್ ಆಗಿದ್ದ.
ಕೇವಲ ಡ್ರಗ್ಸ್ ಮಾತ್ರವಲ್ಲದೆ, ದೇಶವಿರೋಧಿ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುವ ‘ಟೆರರ್ ಫಂಡಿಂಗ್’ ಪ್ರಕರಣಗಳಲ್ಲೂ ಈತನ ಹೆಸರು ಕೇಳಿಬಂದಿತ್ತು.
ಟರ್ಕಿಯ ಭದ್ರತಾ ಏಜೆನ್ಸಿಗಳು ಅಂತಾರಾಷ್ಟ್ರೀಯ ಗುಪ್ತಚರ ಇಲಾಖೆಗಳ ಸಮನ್ವಯದೊಂದಿಗೆ ಈ ಬೃಹತ್ ಕಾರ್ಯಾಚರಣೆ ನಡೆಸಿವೆ. ಸೋರಿಕೆಯಾಗಿರುವ ವಿಡಿಯೋದಲ್ಲಿ, ಶಸ್ತ್ರಸಜ್ಜಿತ ಕಮಾಂಡೋಗಳು ಕಟ್ಟಡವೊಂದಕ್ಕೆ ಮುತ್ತಿಗೆ ಹಾಕಿ ಸಲೀಂ ಡೋಲಾನನ್ನು ಬಂಧಿಸಿ ಕರೆದೊಯ್ಯುತ್ತಿರುವುದು ಕಂಡುಬಂದಿದೆ. ಈತ ನಕಲಿ ದಾಖಲೆಗಳನ್ನು ಬಳಸಿ ಟರ್ಕಿಯಲ್ಲಿ ಅಡಗಿಕೊಂಡಿದ್ದ ಎಂದು ತಿಳಿದುಬಂದಿದೆ.








