ಬಮಾಕೊ: ಆಫ್ರಿಕಾದ ರಾಷ್ಟ್ರ ಮಾಲಿಯಲ್ಲಿ ನಡೆದ ಸಂಘಟಿತ ಭಯೋತ್ಪಾದನಾ ದಾಳಿಯಲ್ಲಿ ದೇಶದ ಪ್ರಭಾವಿ ರಕ್ಷಣಾ ಸಚಿವ ಸಾದಿಯೊ ಕಾಮರಾ (Sadio Camara) ಅವರು ಹತರಾಗಿದ್ದಾರೆ. ದೇಶದಾದ್ಯಂತ ಏಕಕಾಲದಲ್ಲಿ ನಡೆದ ಸರಣಿ ದಾಳಿಗಳ ಭಾಗವಾಗಿ, ಸೇನಾ ಪ್ರಧಾನ ಕಚೇರಿ ಇರುವ ಕಾಟಿ (Kati) ಪಟ್ಟಣದ ಮೇಲೆ ನಡೆದ ದಾಳಿಯಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ.
ರಾಜಧಾನಿ ಬಮಾಕೊದಿಂದ ಕೇವಲ 15 ಕಿ.ಮೀ ದೂರದಲ್ಲಿರುವ ಕಾಟಿ ಪಟ್ಟಣವು ಮಾಲಿ ಸೇನೆಯ ಅತ್ಯಂತ ಪ್ರಮುಖ ನೆಲೆಗಳಲ್ಲಿ ಒಂದು. ಇಲ್ಲಿನ ಗ್ಯಾರಿಸನ್ ಮೇಲೆ ಉಗ್ರರು ಸುಸಜ್ಜಿತವಾಗಿ ದಾಳಿ ನಡೆಸಿದ್ದು, ಈ ವೇಳೆ ರಕ್ಷಣಾ ಸಚಿವರು ಸ್ಥಳದಲ್ಲಿದ್ದರು ಎಂದು ವರದಿಯಾಗಿದೆ.
ಕೇವಲ ಕಾಟಿ ಮಾತ್ರವಲ್ಲದೆ, ದೇಶದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ಸ್ಫೋಟ ಮತ್ತು ಗುಂಡಿನ ದಾಳಿಗಳು ನಡೆದಿವೆ. ಇದು ಅತ್ಯಂತ ವ್ಯವಸ್ಥಿತವಾಗಿ ಯೋಜಿಸಲಾದ ಸಂಚು ಎಂದು ಭದ್ರತಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಾದಿಯೊ ಕಾಮರಾ ಅವರು ಮಾಲಿ ಸೇನಾ ಆಡಳಿತದಲ್ಲಿ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿದ್ದರು. ದೇಶದಲ್ಲಿ ನಡೆಯುತ್ತಿದ್ದ ಬಂಡುಕೋರರ ವಿರುದ್ಧದ ಕಾರ್ಯಾಚರಣೆಯ ನೇತೃತ್ವವನ್ನು ಇವರೇ ವಹಿಸಿದ್ದರು.







