ವಾಷಿಂಗ್ಟನ್ ಡಿ.ಸಿ: ಶ್ವೇತಭವನದ ವರದಿಗಾರರ ಔತಣಕೂಟದಲ್ಲಿ (WHCD) ಭದ್ರತಾ ತಪಾಸಣಾ ಕೇಂದ್ರದ ಬಳಿ ಗುಂಡಿನ ದಾಳಿ ನಡೆಸಿ ಸಂಚಲನ ಮೂಡಿಸಿದ ಶಂಕಿತ ವ್ಯಕ್ತಿಯನ್ನು ಕ್ಯಾಲಿಫೋರ್ನಿಯಾದ 31 ವರ್ಷದ ಕೋಲ್ ಟೋಮಸ್ ಅಲೆನ್ (Cole Tomas Allen) ಎಂದು ಗುರುತಿಸಲಾಗಿದೆ. ಈತ ಕೇವಲ ಆರೋಪಿಯಷ್ಟೇ ಅಲ್ಲದೆ, ಅತ್ಯುನ್ನತ ವಿದ್ಯಾಭ್ಯಾಸ ಮತ್ತು ವೃತ್ತಿಪರ ಹಿನ್ನೆಲೆ ಹೊಂದಿರುವವನು ಎಂಬುದು ಸಾಮಾಜಿಕ ಜಾಲತಾಣಗಳಿಂದ ತಿಳಿದುಬಂದಿದೆ.
ಸಾಮಾಜಿಕ ಜಾಲತಾಣಗಳಾದ ಲಿಂಕ್ಡ್ಇನ್ (LinkedIn) ಮತ್ತು ಫೇಸ್ಬುಕ್ ಪ್ರೊಫೈಲ್ಗಳ ಪ್ರಕಾರ, ಅಲೆನ್ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಎಂಬುದು ಸಾಬೀತಾಗಿದೆ:ಅಲೆನ್ ತನ್ನ ಲಿಂಕ್ಡ್ಇನ್ ಪ್ರೊಫೈಲ್ನಲ್ಲಿ ತಾನು ನಾಸಾ (NASA) ದಲ್ಲಿ ಸಂಶೋಧನಾ ಫೆಲೋಶಿಪ್ ಪಡೆದಿದ್ದಾಗಿ ಉಲ್ಲೇಖಿಸಿದ್ದಾನೆ. ಅಲ್ಲಿ ಆತ ಗ್ರಹಗಳ ಮ್ಯಾಪಿಂಗ್ಗಾಗಿ ಕೃತಕ ಬುದ್ಧಿಮತ್ತೆ (AI) ಮಾದರಿಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಿದ್ದ ಎನ್ನಲಾಗಿದೆ.
ಈತ ಅಮೆರಿಕದ ಪ್ರಸಿದ್ಧ ಕ್ಯಾಲ್ಟೆಕ್ (Caltech) ನಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಮತ್ತು ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ (Master’s) ಪಡೆದಿದ್ದಾನೆ.
ಈತ ಟೊರೆನ್ಸ್ನ ‘C2 ಎಜುಕೇಶನ್’ ಎಂಬ ಸಂಸ್ಥೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದು, 2024ರ ಡಿಸೆಂಬರ್ನಲ್ಲಿ ‘ಅತ್ಯುತ್ತಮ ಶಿಕ್ಷಕ’ (Teacher of the Month) ಎಂಬ ಗೌರವಕ್ಕೂ ಪಾತ್ರನಾಗಿದ್ದ.ಶಿಕ್ಷಣದ ಜೊತೆಗೆ ಸ್ವತಂತ್ರವಾಗಿ ವಿಡಿಯೋ ಗೇಮ್ಗಳನ್ನು ಅಭಿವೃದ್ಧಿಪಡಿಸುವ ಹವ್ಯಾಸವನ್ನೂ ಈತ ಹೊಂದಿದ್ದ.







