ಶಿವಮೊಗ್ಗ: ಪುಸ್ತಕಗಳು ಕೇವಲ ದಾಖಲೆಗಳಾಗಿ ಉಳಿಯದೆ, ಜೀವನ ಸಂಸ್ಕೃತಿಯ ಪ್ರತೀಕವಾಗಿವೆ. ಪುಸ್ತಕ ಓದುವ ಹವ್ಯಾಸವು ಮನುಷ್ಯನ ಜೀವನದ ದೃಷ್ಟಿಕೋನವನ್ನೇ ಬದಲಿಸುವ ಶಕ್ತಿ ಹೊಂದಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.
ಸಾಗರದ ಹುಲಿದೇವರಬನದ ‘ಭುವಿ’ ನಿವಾಸದಲ್ಲಿ ಆಯೋಜಿಸಲಾಗಿದ್ದ ಗೃಹಪ್ರವೇಶ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಲೇಖಕ ವಿ.ಟಿ. ಸ್ವಾಮಿ ಅವರು ರಚಿಸಿದ ‘ರಾಜಣ್ಣ’ (ಕೆ.ಹೆಚ್. ರಾಜಪ್ಪಗೌಡರ ಹೆಜ್ಜೆ ಮೂಡಿಸಿದ ಹಾದಿ) ಎಂಬ ಕೃತಿಯನ್ನು ಬಿಡುಗಡೆಗೊಳಿಸಿ, ಲೇಖಕರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಹಿರಿಯರ ಜೀವನಾದರ್ಶ ಯುವಪೀಳಿಗೆಗೆ ಅಗತ್ಯ
”ಜೀವನದ ಅನೇಕ ನೋವುಗಳನ್ನು ಮೆಟ್ಟಿ ನಿಂತು ಸಾಧನೆ ಮಾಡಿದ ರಾಜಪ್ಪ ಗೌಡರ ಜೀವನದ ವಿಚಾರಧಾರೆಗಳನ್ನು ಪುಸ್ತಕ ರೂಪದಲ್ಲಿ ಹೊರತಂದಿರುವುದು ಶ್ಲಾಘನೀಯ. ಇಂದಿನ ಯುವ ಪೀಳಿಗೆಗೆ ಹಿರಿಯರ ಜೀವನಾದರ್ಶಗಳ ಅಗತ್ಯವಿದ್ದು, ಇಂತಹ ಕೃತಿಗಳು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತವೆ. ಮನೆ ಕಟ್ಟುವ ಜೊತೆಗೆ ಮನಸ್ಸನ್ನು ಕಟ್ಟುವ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರಿಗೂ ಮಾದರಿ,” ಎಂದು ಬೇಳೂರು ತಿಳಿಸಿದರು.

ಓದುವ ಸಂಸ್ಕೃತಿ ಬೆಳೆಯಲಿ: ವಿ.ಟಿ. ಸ್ವಾಮಿ
ಪುಸ್ತಕದ ಲೇಖಕ ವಿ.ಟಿ. ಸ್ವಾಮಿ ಮಾತನಾಡಿ, “ಹೆಚ್ಚು ಓದಿನಿಂದ ಮಾತ್ರ ಉತ್ತಮ ಲೇಖನ ಸಾಧ್ಯ. ಅಂದಿನ ಕಾಲಘಟ್ಟದ ವಿಚಾರಗಳನ್ನು ದಾಖಲಿಸಿದರೆ ಮಾತ್ರ ಮುಂದಿನ ಪೀಳಿಗೆಗೆ ಇತಿಹಾಸದ ಅರಿವು ಮೂಡಿಸಲು ಸಾಧ್ಯವಾಗುತ್ತದೆ. ರಾಜಪ್ಪ ಗೌಡರ ಜೀವನದ ದುರ್ಗಮ ಹಾದಿ ಮತ್ತು ಸಾಧನೆಗಳನ್ನು ದಾಖಲಿಸುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ,” ಎಂದರು.
ಕಳೆದುಹೋದ ಇತಿಹಾಸದ ಅನಾವರಣ
ಮುಖ್ಯ ಅತಿಥಿಗಳಾಗಿದ್ದ ರತ್ನಾಕರ್ ಕಲಗೋಡು ಮಾತನಾಡಿ, ಶರಾವತಿ ಹಿನ್ನೀರಿನ ಪ್ರದೇಶದ ಜನರ ಬದುಕು ಅತ್ಯಂತ ಸಾಹಸಮಯ ಮತ್ತು ನೋವಿನಿಂದ ಕೂಡಿದೆ. ಮುಳುಗಡೆಯ ಸಂಕಷ್ಟವನ್ನು ಅನುಭವಿಸಿದ ನೂರಾರು ಕುಟುಂಬಗಳಲ್ಲಿ ರಾಜಪ್ಪ ಗೌಡರ ಕುಟುಂಬವೂ ಒಂದು. ಅವರ ಜೀವನದ ಹಾದಿಯನ್ನು ದಾಖಲಿಸುವ ಮೂಲಕ ಕಳೆದುಹೋದ ಇತಿಹಾಸವನ್ನು ಮರುಸೃಷ್ಟಿಸುವ ಕೆಲಸ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಿ.ಎ. ಇಂದೂಧರ ಗೌಡ್ರು, ಟಿ.ಡಿ. ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ಪ್ರಸನ್ನ ಕೆರೆಕೈ, ಸುವರ್ಣ ಟೆಕಪ್ಪ, ದಿನೇಶ್ ಬರದವಳ್ಳಿ, ಬಿಇಓ ಸದಾನಂದ ಸ್ವಾಮಿ ಸಿ, ರಾಜಪ್ಪ ಗೌಡರು, ಪಾರ್ವತಮ್ಮ, ರಾಜೇಂದ್ರ ಆವಿನಹಳ್ಳಿ ಹಾಗೂ ಗೃಹ ಮಾಲೀಕ ಪ್ರಕಾಶ್ ಕೆ.ಆರ್. ಉಪಸ್ಥಿತರಿದ್ದರು.
ವಿಶೇಷ ಆಕರ್ಷಣೆ:
- ಹಾಸ್ಯ ಸಂಜೆ: ಶಿವಮೊಗ್ಗದ ಉಮೇಶ್ ಗೌಡ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಿತು.
- ಪ್ರತಿಭಾ ಪುರಸ್ಕಾರ: ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ಪಡೆದ ಗಿಣಿವಾರದ ಕೊಡಚಾದ್ರಿ ಆಂಗ್ಲ ಮಾಧ್ಯಮ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.








