ಬೆಂಗಳೂರು : ಇತ್ತೀಚಿಗೆ ವಿಜಯಪುರದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಗ್ರಾಮ ಪಂಚಾಯತ್ ಮಾಜಿ ಸದಸ್ಯನ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಲಿಯಾಬಾದ್ ಬಳಿಯ ಕೈಗಾರಿಕಾ ಪ್ರದೇಶದ ಹತ್ತಿರ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಗೊಡಂದಡ್ಡಿ ಗ್ರಾಮದ ನಿವಾಸಿ ರಾಜು ಖರೆ (48) ಎಂಬುವರನ್ನು, ಅವರು ಚಲಾಯಿಸುತ್ತಿದ್ದ ವಾಹನಕ್ಕೆ ಮೊದಲು ಟಿಪ್ಪರ್‌ನಿಂದ ಡಿಕ್ಕಿ ಹೊಡೆದು ಬಳಿಕ ವಾಹನದ ಮೇಲೆ ಗುಂಡಿನ ದಾಳಿ ನಡೆಸಿ, ಬಳಿಕ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿತ್ತು. ಆಸ್ತಿ ವಿವಾದದ ಕಾರಣ ನಡೆದ ಕೊಲೆ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು.
ಆರೋಪಿ ಅಬಾಶ್ಯಾ ಕೊಡ್ಲೆಕರ್ ಸಂಬಂಧಿಕರಾದ ಮುರ್ತುಬಾ ಖರೆ ಸಹೋದರಿಗೆ ಸೇರಿದ ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ರಾಜು ಖರೆ ಭಾಗಿಯಾಗಿದ್ದ. ಮುರ್ತುಬಾ ಖರೆ ಪತ್ನಿ ಮನೀಷಾ ಪರವಾಗಿ ಅಬಾಶ್ಯಾ ಕೊಡ್ಲೆಕರ್ ನಿಂತಿದ್ದ. ಮನೀಷಾಳಿಗೆ ಸೋದರ ಮಾವನಾಗಿದ್ದ ಅಬಾಶ್ಯಾ ಈ ಆಸ್ತಿ ವಿಚಾರದಲ್ಲಿ ರಾಜು ಖರೆ ಭಾಗಿಯಾಗಿದ್ದಕ್ಕೆ ಕೋಪಗೊಂಡಿದ್ದ. ಇದೇ ಸಿಟ್ಟಲ್ಲಿ ರಾಜು ಖರೆಯನ್ನು ಕೊಲೆ ಮಾಡಿದ್ಧಾರೆ.
ಅಲಿಯಾಬಾದಿನ ಪಾಂಗ್ರೂನ್ ದೊಡ್ಡಿಯ ಪ್ರಮುಖ ಆರೋಪಿ ಅಬಾಶ್ಯಾ ಕೊಡ್ಲೆಕರ, ಮಾನೇನದೊಡ್ಡಿಯ ಅಬಾಶ್ಯಾ ಮಾನೆ, ಅಲಿಯಾಬಾದಿನ ವಾಗೀಶ ಪೋಳ, ಅಲಿಯಾಬಾದ್ ತಾಂಡಾದ ಖಂಡೂಬಾ ತಾಂಡೆ, ಪಾಂಗ್ರೂಬನ್ ದೊಡ್ಡಿಯ ಜಾಲಿಂದರ್ ಹಕ್ಕೆ, ಮುರುಗು ಹಕ್ಕೆ ಬಂಧಿತರು. ಸದ್ಯ ಆರು ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಆರು ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.








