ರಾಯಚೂರು : ಆನ್‌ಲೈನ್‌ನಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ಮೂವರು ಆರೋಪಿಗಳನ್ನು ರಾಯಚೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರುಕ್ಮಾಪುರ ಮೂಲದ ಮಹೇಶ, ವೀರೇಶ ಮತ್ತು ಪ್ರಭು ಬಂಧಿತ ಆರೋಪಿಗಳು. ಬಂಧಿತರಿಂದ ನಗದು, ವಾಹನ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದ ಲಕ್ಷ್ಮೀ ಲೇಔಟ್‌ನಲ್ಲಿ ಬಾಡಿಗೆ ಮನೆ ಪಡೆದಿದ್ದ ಈ ಮೂವರು ಆರೋಪಿಗಳು, ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ಸಾಲ ಸೌಲಭ್ಯ ಕಲ್ಪಿಸುವುದಾಗಿ ನಂಬಿಸುತ್ತಿದ್ದರು. ನಂತರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಸೇರಿದಂತೆ ವೈಯಕ್ತಿಕ ದಾಖಲೆಗಳನ್ನು ಪಡೆದು, ವಿವಿಧ ಕಂಪನಿಗಳ ಸಿಮ್ ಕಾರ್ಡ್‌ಗಳನ್ನು ಬಳಸಿ ಕ್ಯೂಆರ್ ಕೋಡ್‌ಗಳನ್ನು ಸೃಷ್ಟಿಸುತ್ತಿದ್ದರು. ಈ ವಿಧಾನದಲ್ಲಿ ಸಾರ್ವಜನಿಕರ ಖಾತೆಗಳಿಂದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ಯಾವುದೇ ಸಾಲ ನೀಡದೇ ವಂಚಿಸುತ್ತಿದ್ದರು.
ಈ ಕುರಿತು ಖಚಿತ ಮಾಹಿತಿ ಆಧರಿಸಿ ರಾಯಚೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಅವರ ಮಾರ್ಗದರ್ಶನದಲ್ಲಿ, ಸೈಬರ್ ಕ್ರೈಂ ಠಾಣೆಯ ಪ್ರಭಾರಿ ಡಿವೈಎಸ್‌ಪಿ ಶಾಂತವೀರ ಇ. ಅವರ ನೇತೃತ್ವದಲ್ಲಿ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಅಪರಾಧಕ್ಕೆ ಬಳಸಿದ್ದ 8 ಮೊಬೈಲ್ ಫೋನ್‌ಗಳು, ಹಲವು ಸಿಮ್ ಕಾರ್ಡ್‌ಗಳು, ಒಂದು ಕಾರು ಹಾಗೂ ಯಮಹಾ ಮೋಟಾರ್ ಸೈಕಲ್ ಅನ್ನು ಜಪ್ತಿ ಮಾಡಲಾಗಿದೆ.








