ಬೆಂಗಳೂರು : ಸಿಇಟಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮುಖ್ಯಮಂತ್ರಿಗೆ ದೂರು ನೀಡಿ, ಕಾಲೇಜು ಪರವಾನಗಿ ರದ್ದುಪಡಿಸಿ 25 ಲಕ್ಷ ರೂ.ದಂಡ ವಿಧಿಸಲು ಆಗ್ರಹಿಸಿದೆ. ಇದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಬ್ರಾಹ್ಮಣ ಸಮುದಾಯ ಆಕ್ರೋಶ ವ್ಯಕ್ತಪಡಿಸಿದ್ದು, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದೆ.
ರಾಜ್ಯದಲ್ಲಿ ಜನಿವಾರದ ಜಟಾಪಟಿ ತೀವ್ರವಾಗಿದ್ದು, ಸಿಇಟಿ ಪರೀಕ್ಷಾರ್ಥಿಗಳ ಜನಿವಾರ ತೆಗೆಸಲು ನಿಯಮ ಇಲ್ಲದಿದ್ದರೂ ತೆಗೆಸಿರೋದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಇದೀಗ ಮಡಿವಾಳ ಠಾಣೆಯ ಪೊಲೀಸರಿಂದ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್, ಈ ಘಟನೆ ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ. ಜನಿವಾರ ತೆಗೆಸಿದ ಪರಿಣಾಮ ವಿದ್ಯಾರ್ಥಿಗಳು ಮತ್ತು ಪೋಷಕರು ಮಾನಸಿಕವಾಗಿ ನೊಂದಿದ್ದಾರೆ.
ಕಳೆದ ವರ್ಷವೂ ಇಂತಹ ಘಟನೆ ನಡೆದಾಗ ಮಹಾಸಭಾ ಕರ್ನಾಟಕ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು ಎಂದು ರಘುನಾಥ್ ತಿಳಿಸಿದ್ದಾರೆ. 2025ರ ಡಿಸೆಂಬರ್ನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದ್ದರೂ, ಇದೀಗ ಮತ್ತೆ ಇದೇ ರೀತಿಯ ಘಟನೆ ನಡೆದಿದೆ ಎಂಬುದಾಗಿ ಆರೋಪಿಸಲಾಗಿದೆ. ಈ ಘಟನೆ ಬ್ರಾಹ್ಮಣ ಸಮುದಾಯದ ಮೇಲಿನ ಅತಿಕ್ರಮ ಎಂದು ಮಹಾಸಭಾ ಅಭಿಪ್ರಾಯಪಟ್ಟಿದೆ.








