ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹೈದರ್‌ಪೋರಾ ಪ್ರದೇಶದ ಖಾಸಗಿ ಹೋಟೆಲ್ ಒಂದರಲ್ಲಿ ಲಿಫ್ಟ್ ಕುಸಿದು ಬಿದ್ದ ಪರಿಣಾಮ, ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಆರು ಮಂದಿ ಗಾಯಗೊಂಡಿದ್ದಾರೆ. ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಶುಕ್ರವಾರ (ಏಪ್ರಿಲ್ 24) ಶ್ರೀನಗರದ ‘ಹೋಟೆಲ್ ಅರಿಸನ್ ಲಕ್ಸುರಿ’ಯಲ್ಲಿ (Hotel Arison Luxury) ಈ ಘಟನೆ ನಡೆದಿದೆ. ಪ್ರವಾಸಿಗರು ಲಿಫ್ಟ್ ಬಳಸುತ್ತಿದ್ದಾಗ ಅದು ಹಠಾತ್ ಆಗಿ ಕೆಳಕ್ಕೆ ಕುಸಿದಿದೆ.
ಗಾಯಗೊಂಡವರನ್ನು ವೆಂಕಟೇಶ್ (65), ಮಂಗಳಾ (54), ಕುಶಾಲಾ (18), ಪಂಕಜಾ (16), ವೆಂಕಟಲಕ್ಷ್ಮಮ್ಮ (60) ಮತ್ತು ಸೌಭಾಗ್ಯ (60) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೆಂಗಳೂರಿನ ನಿವಾಸಿಗಳಾಗಿದ್ದಾರೆ.
ಘಟನೆ ನಡೆದ ತಕ್ಷಣ ಹೋಟೆಲ್ ಸಿಬ್ಬಂದಿ ಮತ್ತು ಸ್ಥಳೀಯರು ಗಾಯಾಳುಗಳನ್ನು ಸಮೀಪದ ಬರ್ಜುಲ್ಲಾದಲ್ಲಿರುವ ಅಸ್ಥಿ ಮತ್ತು ಕೀಲು ಆಸ್ಪತ್ರೆಗೆ (Bone and Joint Hospital) ದಾಖಲಿಸಿದ್ದಾರೆ.
ಗಾಯಾಳುಗಳ ಕಾಲು ಮತ್ತು ಬೆನ್ನಿನ ಭಾಗಕ್ಕೆ ಏಟುಗಳಾಗಿದ್ದು, ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಮತ್ತು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.








