ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದಿನಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮೂರು ದಿನಗಳ ಕಾಲ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಭೇಟಿಯ ವೇಳೆ ಅವರು ಪ್ರಮುಖವಾಗಿ ಗ್ರೇಟ್ ನಿಕೋಬಾರ್ ದ್ವೀಪದ ಬುಡಕಟ್ಟು ಸಮುದಾಯಗಳ ಅಳಲನ್ನು ಆಲಿಸಲಿದ್ದಾರೆ.
ಗ್ರೇಟ್ ನಿಕೋಬಾರ್‌ನಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ₹81,000 ಕೋಟಿ ಮೊತ್ತದ ಮೂಲಸೌಕರ್ಯ ಯೋಜನೆಯಿಂದ ಸ್ಥಳೀಯ ಪರಿಸರ ಮತ್ತು ಅಲ್ಲಿನ ಶೋಂಪೆನ್ ಹಾಗೂ ನಿಕೋಬಾರಿ ಬುಡಕಟ್ಟುಗಳ ಮೇಲೆ ಆಗಲಿರುವ ಪರಿಣಾಮಗಳ ಬಗ್ಗೆ ರಾಹುಲ್ ಗಾಂಧಿ ಚರ್ಚಿಸಲಿದ್ದಾರೆ.
ಏಪ್ರಿಲ್ 27ರಂದು ಶ್ರೀ ವಿಜಯ ಪುರಂನಲ್ಲಿ (ಹಳೆಯ ಹೆಸರು ಪೋರ್ಟ್ ಬ್ಲೇರ್) ಬೃಹತ್ ರೋಡ್ ಶೋ ನಡೆಸಲಿರುವ ರಾಹುಲ್, ನಂತರ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ತಮ್ಮ ಪ್ರವಾಸದ ಭಾಗವಾಗಿ ಅವರು ಗಲಾಥಿಯಾ ಬೇ ಮತ್ತು ಭಾರತದ ದಕ್ಷಿಣದ ತುದಿ ಎನಿಸಿಕೊಂಡಿರುವ ಇಂದಿರಾ ಪಾಯಿಂಟ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ.








