ಬೆಂಗಳೂರು : ಗೃಹ ಸಚಿವ ಡಾ.ಜಿ ಪರಮೇಶ್ವರ್ ವಿರುದ್ಧ 500 ರೂಪಾಯಿ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಜಿ.ಪರಮೇಶ್ವರ್ 42ನೇ ACJM ಕೋರ್ಟ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ತುಮಕೂರಿನಲ್ಲಿ ನಡೆದಿದ್ದ ಕಬಡ್ಡಿ ಪಂದ್ಯದಲ್ಲಿ ಅತಿಥಿಯಾಗಿ ಭಾಗವಹಿಸಿ ಅನಧಿಕೃತ ಬೆಟ್ಟಿಂಗ್ ಕಟ್ಟಿ; ಸಣ್ಣ ಸಂಘಟಿತ ಅಪರಾಧ ಕೃತ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಗೃಹಸಚಿವ ಜಿ.ಪರಮೇಶ್ವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಎಂದು ನಿನ್ನೆ ಜನಪ್ರತಿನಿಧಿಗಳ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿತ್ತು.
ಪ್ರಕರಣ ಹಿನ್ನೆಲೆ
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಹಂದ್ರಾಳು ಗ್ರಾಮದ ಎಚ್.ಆರ್.ನಾಗಭೂಷಣ್ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸಿದ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಈ ಕುರಿತಂತೆ ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಪೊಲೀಸ್ ಠಾಣಾಧಿಕಾರಿಗೆ ಆದೇಶಿಸಿದ್ದು, ಎಫ್‌ಐಆರ್ ಸಿದ್ಧಪಡಿಸಿ ಕಳುಹಿಸುವಂತೆ ನಿರ್ದೇಶಿಸಿದ್ದಾರೆ.
‘ಪಂದ್ಯದಲ್ಲಿ ಸಚಿವ ಪರಮೇಶ್ವರ್ 2025ರ ಅಕ್ಟೋಬರ್ 19ರಂದು ತುಮಕೂರು ನಗರದಲ್ಲಿ ನಡೆದಿದ್ದ ಕಬಡ್ಡಿ ಪಂದ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡದ ವಿರುದ್ಧ ₹500 ಬೆಟ್ಟಿಂಗ್ ಕಟ್ಟುವ ಮೂಲಕ ಅಪರಾಧ ಕೃತ್ಯಗಳನ್ನು ಎಸಗಲು ಸಾರ್ವಜನಿಕವಾಗಿ ಪ್ರಚೋದನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಪದೇ ಪದೇ ಅಪರಾಧಿಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ಅಂತೆಯೇ, ಈ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ವಿರುದ್ಧವೂ ಕರ್ನಾಟಕ ಪೊಲೀಸ್ ಹಾಗೂ ಬಿಎನ್‌ಎಸ್ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಬೇಕು ಎಂದು ಕೋರಿ ಖಾಸಗಿ ದೂರು ಸಲ್ಲಿಸಿದ್ದರು.
ಈ ಮೊದಲು ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರು ಕೊಡಿಗೇನಹಳ್ಳಿ ಠಾಣೆಗೆ ದೂರು ನೀಡಿದ್ದರು. ‘ದೂರು ಆಧಾರರಹಿತ. ಇದರಲ್ಲಿ ಸಾಕ್ಷ್ಯದ ಕೊರತೆ ಇದೆ’ ಎಂಬ ಕಾರಣ ನೀಡಿ ಎಫ್‌ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿದ್ದರು. ಈ ಸಂಬಂಧ ದೂರುದಾರರು ಮಧುಗಿರಿ ಡಿವೈಎಸ್‌ಪಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ.








