ಹಾವೇರಿ : ಇತ್ತೀಚಿಗೆ ಯಾದಗಿರಿಯಲ್ಲಿ ಕಾರು ಬಸ್ ಗೆ ಡಿಕ್ಕಿಯಾಗಿ 6 ಜನ ಸಜೀವ ದಹನಗೊಂಡಿದ್ದರು. ಇದೀಗ ಹಾವೇರಿಯಲ್ಲಿ ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ವ್ಯಕ್ತಿ ಸಜೀವ ದಹನವಾದ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡ ಗ್ರಾಮದ ಬಳಿ ಘಟನೆ ಬುಧವಾರ ನಡೆದಿದೆ. 48 ವರ್ಷದ ಭಾಷಾಸಾಬ್ ಮೃತ ವ್ಯಕ್ತಿ.
ಬೊಲೆರೋ ಮತ್ತು ಇಟ್ಟಿಗೆ ತುಂಬಿದ ಕ್ಯಾಂಟರ್ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ ಬೊಲೆರೋ ವಾಹನ ಚಾಲಕ ಚಿಕ್ಕೆರೂರು ಗ್ರಾಮದ ನಿವಾಸಿ ಭಾಷಾಸಾಬ್ ಸಜೀವ ದಹನಗೊಂಡರೆ, ಮಣಿಕಂಠ, ಸುರೇಶ, ಯೊಗೇಶ್ವರ ಮತ್ತು ನಾಸೀರ್ಸಾಬ್ ಎಂಬುವರು ಗಾಯಗೊಂಡಿದ್ದಾರೆ.
ತಕ್ಷಣ ಅವರನ್ನು ಹಿರೇಕೆರೂರು ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಂಸಭಾವಿಯಿಂದ ಕೋಡ ಗ್ರಾಮ ಸಂಪರ್ಕಿಸುವ ರಸ್ತೆಯಲ್ಲಿ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಹಿರೇಕೆರೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.








