ಬೆಂಗಳೂರು:ಕೋಟಿ ಕೋಟಿ ಮೌಲ್ಯದ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷದಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಕನ್ನಡದ ಮಾಜಿ ನಟಿ ರನ್ಯಾ ರಾವ್ (Ranya Rao) ಅವರು ಬುಧವಾರ (ಏಪ್ರಿಲ್ 22, 2026) ಸಂಜೆ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕಟ್ಟುನಿಟ್ಟಿನ ‘ಕೋಫೆಪೋಸಾ’ (COFEPOSA) ಕಾಯ್ದೆಯಡಿ ವಿಧಿಸಲಾಗಿದ್ದ ಒಂದು ವರ್ಷದ ಮುಂಜಾಗ್ರತಾ ಬಂಧನದ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಬಿಡುಗಡೆ ನಡೆದಿದೆ.
2025ರ ಮಾರ್ಚ್ 3ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಅಧಿಕಾರಿಗಳು ತಡೆದಿದ್ದರು. ಈ ವೇಳೆ ಅವರ ಬಳಿ ಸುಮಾರು 12.56 ಕೋಟಿ ರೂ. ಮೌಲ್ಯದ 14.2 ಕೆಜಿ ಅಕ್ರಮ ಚಿನ್ನ ಪತ್ತೆಯಾಗಿತ್ತು.
ತನಿಖೆಯ ವೇಳೆ ರನ್ಯಾ ರಾವ್ ಮತ್ತು ಅವರ ತಂಡವು 2024 ರಿಂದ 2025 ರ ನಡುವೆ ಒಟ್ಟು 127 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಡಿಆರ್‌ಐ ಇವರ ಮೇಲೆ 102.5 ಕೋಟಿ ರೂ.ಗಳ ಬೃಹತ್ ದಂಡವನ್ನೂ ವಿಧಿಸಿದೆ.
ಈ ಹಗರಣದ ಗಂಭೀರತೆಯನ್ನು ಪರಿಗಣಿಸಿ, ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ (COFEPOSA) ಅಡಿಯಲ್ಲಿ ರನ್ಯಾ ಅವರನ್ನು ಒಂದು ವರ್ಷ ಕಾಲ ಯಾವುದೇ ಜಾಮೀನು ಇಲ್ಲದೆ ಬಂಧನದಲ್ಲಿಡಲಾಗಿತ್ತು.
ರನ್ಯಾ ರಾವ್ ಅವರು ಹಿರಿಯ ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ಅವರ ಪುತ್ರಿಯಾಗಿದ್ದು (Stepdaughter), ಈ ಪ್ರಕರಣವು ಪೊಲೀಸ್ ಇಲಾಖೆಯಲ್ಲೂ ದೊಡ್ಡ ಸಂಚಲನ ಮೂಡಿಸಿತ್ತು. ಈ ಅಕ್ರಮದಲ್ಲಿ ಅಧಿಕಾರಿಯ ಪಾತ್ರದ ಬಗ್ಗೆಯೂ ತನಿಖೆಗಳು ನಡೆದಿದ್ದವು.








