ಮುಂಬೈ:ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಂಪನಿಯ ನಾಸಿಕ್ ಘಟಕದಲ್ಲಿ ನಡೆದಿದೆ ಎನ್ನಲಾದ ಧಾರ್ಮಿಕ ಕಿರುಕುಳ ಮತ್ತು ಬಲವಂತದ ಮತಾಂತರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಡ್ಯಾನಿಶ್ ಎಜಾಜ್ ಶೇಖ್ ಸಲ್ಲಿಸಿದ್ದ ಮುಂಜಾಗ್ರತಾ ಜಾಮೀನು ಅರ್ಜಿಯನ್ನು ನಾಸಿಕ್ ಜಿಲ್ಲಾ ನ್ಯಾಯಾಲಯವು ವಜಾಗೊಳಿಸಿದೆ.
ಸಹೋದ್ಯೋಗಿಗಳಿಗೆ ಧಾರ್ಮಿಕವಾಗಿ ಅವಮಾನ ಮಾಡುವುದು, ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುವುದು ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ ಆರೋಪಗಳು ಡ್ಯಾನಿಶ್ ಶೇಖ್ ಮತ್ತು ಇತರರ ಮೇಲಿವೆ. ಈ ಕುರಿತು ಎಂಟು ಪ್ರತ್ಯೇಕ ಎಫ್‌ಐಆರ್‌ಗಳು (FIR) ದಾಖಲಾಗಿವೆ.
ಪ್ರಕರಣದ ತನಿಖೆಯು ಆರಂಭಿಕ ಹಂತದಲ್ಲಿದ್ದು, ಇಂತಹ ಗಂಭೀರ ಆರೋಪಗಳಿರುವಾಗ ಜಾಮೀನು ನೀಡುವುದು ತನಿಖೆಗೆ ಅಡ್ಡಿಯಾಗಬಹುದು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಈ ಕೃತ್ಯವು ಸಮಾಜದ ಶಾಂತಿ ಮತ್ತು ಸೌಹಾರ್ದತೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಕೋರ್ಟ್ ಹೇಳಿದೆ.
ಡ್ಯಾನಿಶ್ ಶೇಖ್ ಈಗಾಗಲೇ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈಗ ಧಾರ್ಮಿಕ ಕಿರುಕುಳದ ಪ್ರಕರಣದಲ್ಲೂ ಆತನಿಗೆ ಹಿನ್ನಡೆಯಾಗಿದೆ.








