ಬೆಳಗಾವಿ : ಬೆಳಗಾವಿಯಲ್ಲಿ ಮನಕಲಕುವ ಘಟನೆ ಒಂದು ನಡೆದಿದ್ದು, ನದಿಯಲ್ಲಿ ಈಜಲು ಹೋಗಿ ಮುಳುಗುತ್ತಿದ್ದ ಪುತ್ರನನ್ನು ರಕ್ಷಿಸಲು ಮುಂದಾದ ತಾಯಿಯೂ ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಸಂಕೇಶ್ವರ ಪಟ್ಟಣದ ನಿವಾಸಿ ಲಕ್ಷ್ಮೀ ಸುಧಾಕರ ಕುಟೋಳಿ (27) ಮೃತರು. ಅವರ 9 ವರ್ಷದ ಪುತ್ರ ಸುಪ್ರೀತ್ ಸಹ ನೀರಲ್ಲಿ ಕಾಣೆಯಾಗಿದ್ದು, ಅದೇ ಪೊಲೀಸರು ಆತನ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ತಾಯಿ ಮತ್ತು ಮಗ ಇಬ್ಬರೂ ಸಂಕೇಶ್ವರ ಪಟ್ಟಣದಲ್ಲಿರುವ ಶಂಕರಲಿಂಗ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವರ ದರ್ಶನದ ಬಳಿಕ, ದೇವಸ್ಥಾನದ ಪಕ್ಕದಲ್ಲೇ ಹರಿಯುವ ಹಿರಣ್ಯಕೇಶಿ ನದಿಯ ಬಳಿ ತೆರಳಿದ್ದರು.
ಈ ವೇಳೆ ಬಾಲಕ ಸುಪ್ರೀತ್ ನದಿಯಲ್ಲಿ ಈಜಲು ಇಳಿದಿದ್ದಾನೆ. ನದಿಯ ಆಳದ ಅರಿವಿಲ್ಲದೆ ನೀರಿನಲ್ಲಿ ಮುಳುಗುತ್ತಿದ್ದ. ಮಗನು ನೀರುಪಾಲಾಗುತ್ತಿರುವುದನ್ನು ಕಂಡು ಆತಂಕಗೊಂಡ ತಾಯಿ ಲಕ್ಷ್ಮೀ, ಆತನನ್ನು ರಕ್ಷಿಸಲು ತಕ್ಷಣವೇ ನದಿಗೆ ಹಾರಿದ್ದರು. ಆದರೆ, ದುರಾದೃಷ್ಟವಶಾತ್ ಈಜು ಬಾರದ ಕಾರಣ ಇಬ್ಬರೂ ನದಿಯಲ್ಲಿ ಮುಳುಗಿದ್ದಾರೆ.
ಕಾರ್ಯಾಚರಣೆ ವೇಳೆ ತಾಯಿ ಲಕ್ಷ್ಮೀ ಅವರ ಮೃತದೇಹ ಪತ್ತೆಯಾಗಿದೆ. ನದಿ ತೀರದಲ್ಲಿ ಬಾಲಕನ ಬಟ್ಟೆಗಳು ಪತ್ತೆಯಾಗಿರುವುದರಿಂದ, ಆತನು ಮುಳುಗಿರುವ ಶಂಕೆ ದೃಢಪಟ್ಟಿದೆ. ಮಗುವಿನ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ತೀವ್ರ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.








