ಮುಂಬೈ: ಮುಂಬೈನ ಬೈಕುಲ್ಲಾ ಪ್ರದೇಶದಲ್ಲಿ ನಡೆದ ಕ್ಷುಲ್ಲಕ ಕಾರಣದ ರಸ್ತೆ ಜಗಳ ವಿಕೋಪಕ್ಕೆ ತಿರುಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ಹಾಗೂ ತೃಣಮೂಲ ಕಾಂಗ್ರೆಸ್ (TMC) ಸಂಸದ ಯೂಸುಫ್ ಪಠಾಣ್ ಅವರ ಮಾವ ಮತ್ತು ಭಾವ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾತ್ರಿ ಬೈಕುಲ್ಲಾ ನಿವಾಸಿ ಯೂಸುಫ್ ಖಾನ್ ಎಂಬುವವರು ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ, ರಸ್ತೆಯ ಗುಂಡಿಯಲ್ಲಿದ್ದ ನೀರು ಪಾದಚಾರಿ ಮಾರ್ಗದಲ್ಲಿದ್ದ ಶೋಯೆಬ್ ಖಾನ್ ಎಂಬುವವರ ಮೇಲೆ ಸಿಡಿದಿದೆ. ಶೋಯೆಬ್ ಅವರು ಯೂಸುಫ್ ಪಠಾಣ್ ಅವರ ಸಂಬಂಧಿಯಾಗಿದ್ದು, ಈ ಸಣ್ಣ ವಿಷಯಕ್ಕೆ ಇಬ್ಬರ ನಡುವೆ ಜೋರು ಮಾತಿನ ಚಕಮಕಿ ನಡೆದಿದೆ.
ನೀರು ಸಿಡಿದಿದ್ದಕ್ಕೆ ಯೂಸುಫ್ ಖಾನ್ ಕ್ಷಮೆಯಾಚಿಸಿದರೂ ಸಹ ಶೋಯೆಬ್ ಅವರು ಅಶ್ಲೀಲ ಪದಗಳಿಂದ ನಿಂದಿಸಿ, ಬಿದಿರಿನ ಕೋಲಿನಿಂದ ಕಾರಿನ ಗಾಜನ್ನು ಪುಡಿ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ನೊಂದ ಯೂಸುಫ್ ಖಾನ್ ಅವರು ದೂರು ನೀಡಲು ಪೊಲೀಸ್ ಠಾಣೆಗೆ ಹೋಗುತ್ತಿದ್ದಾಗ, ದಾರಿಯಲ್ಲಿ ಶೋಯೆಬ್ ಖಾನ್ ಜೊತೆಗೆ ಯೂಸುಫ್ ಪಠಾಣ್ ಅವರ ಮಾವ ಖಾಲಿದ್ ಖಾನ್ (ಮಕಾಲಿಕ್) ಮತ್ತು ಮಗ (ಭಾವ) ಉಮರ್ಶಾದ್ ಪಠಾಣ್ ಸೇರಿ ತಂಡವೊಂದು ಅಡ್ಡಗಟ್ಟಿದೆ.
ಈ ವೇಳೆ ತಂಡವು ಬ್ಯಾಟ್ ಮತ್ತು ಬಿದಿರಿನ ಕೋಲುಗಳಿಂದ ಯೂಸುಫ್ ಖಾನ್ ಮತ್ತು ಅವರ ಕುಟುಂಬದ ಮೇಲೆ ದಾಳಿ ನಡೆಸಿದೆ. ಈ ಹಲ್ಲೆಯಲ್ಲಿ ಯೂಸುಫ್ ಖಾನ್ ಅವರ ಸಹೋದರ ಸಲ್ಮಾನ್ ಅವರ ಕೈ ಮೂಳೆ ಮುರಿದಿದ್ದು, ಚಿಕ್ಕಪ್ಪ ಜಕಿ ಅಹ್ಮದ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೈಕುಲ್ಲಾ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಯೂಸುಫ್ ಪಠಾಣ್ ಅವರ ಮಾವ ಖಾಲಿದ್ ಖಾನ್, ಭಾವ ಉಮರ್ಶಾದ್ ಮತ್ತು ಶೋಯೆಬ್ ಖಾನ್ ಅವರನ್ನು ಬಂಧಿಸಿದ್ದಾರೆ. ನಾಲ್ಕನೇ ಆರೋಪಿ ಶಹಬಾಜ್ ಪಠಾಣ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.








