ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ಇಡೀ ರಾಜ್ಯದ ಜನತೆಗೆ ಸದ್ಯಕ್ಕೆ ಬಿಸಿಲಿನ ಧಗೆಯಿಂದ ಮುಕ್ತಿ ಸಿಗುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ಒಂದು ವಾರ ಕಾಲ ರಾಜ್ಯಾದ್ಯಂತ ಬಿಸಿಲ ಝಳ (Heatwave) ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
ಬೆಂಗಳೂರು ನಗರದಲ್ಲಿ ಈಗಾಗಲೇ ತಾಪಮಾನ 36-37 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ. ಕೇವಲ ಹಗಲಿನಲ್ಲಿ ಮಾತ್ರವಲ್ಲದೆ, ರಾತ್ರಿ ವೇಳೆಯೂ ಉಷ್ಣಾಂಶ ಹೆಚ್ಚಿರಲಿರುವುದರಿಂದ ಸಾರ್ವಜನಿಕರು ವಿಪರೀತ ಸೆಕೆಯಿಂದ ತತ್ತರಿಸಲಿದ್ದಾರೆ.
ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಈಗಾಗಲೇ ಉಷ್ಣಾಂಶ 41 ಡಿಗ್ರಿ ಗಡಿ ದಾಟಿದೆ. ಮುಂದಿನ ಒಂದು ವಾರ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನವು 40 ರಿಂದ 42 ಡಿಗ್ರಿ ಸೆಲ್ಸಿಯಸ್ ವರೆಗೆ ದಾಖಲಾಗುವ ಸಾಧ್ಯತೆಯಿದೆ.ರಣಬಿಸಿಲಿನ ಹೊಡೆತಕ್ಕೆ ಕರುನಾಡು ಬೆಂಡಾಗಿದ್ದು, ಮಧ್ಯಾಹ್ನದ ವೇಳೆ ರಸ್ತೆಗಿಳಿಯಲು ಜನ ಭಯಪಡುವಂತಾಗಿದೆ.
ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು ಮತ್ತು ಸಾಧ್ಯವಾದಷ್ಟು ಮಧ್ಯಾಹ್ನದ ಹೊತ್ತು ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಸಾರ್ವಜನಿಕರಿಗೆ ಪ್ರಮುಖ ಮಾರ್ಗಸೂಚಿಗಳು:
ಏನು ಮಾಡಬೇಕು? (Dos)
ಹೈಡ್ರೇಶನ್: ಬಾಯಾರಿಕೆ ಇಲ್ಲದಿದ್ದರೂ ಆಗಾಗ್ಗೆ ನೀರು, ಮಜ್ಜಿಗೆ, ಎಳೆನೀರು ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಕುಡಿಯಿರಿ.
ಉಡುಪು: ಸಡಿಲವಾದ, ತೆಳು ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಹೋಗುವಾಗ ಛತ್ರಿ, ಟೋಪಿ ಅಥವಾ ಕನ್ನಡಕ ಬಳಸಿ.
ಸಮಯ: ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ಸಾಧ್ಯವಾದಷ್ಟು ಮನೆಯೊಳಗೇ ಇರಿ.
ಆರೋಗ್ಯ: ಕೈಗಳನ್ನು ಸಾಬೂನಿನಿಂದ ತೊಳೆದು ಆಹಾರ ಸೇವಿಸಿ. ಮನೆಯಲ್ಲಿ ತಯಾರಿಸಿದ ತಾಜಾ ಮತ್ತು ಸಾತ್ವಿಕ ಆಹಾರಕ್ಕೆ ಆದ್ಯತೆ ನೀಡಿ.
ಏನು ಮಾಡಬಾರದು? (Don’ts)
ಪಾನೀಯಗಳು: ಅತಿಯಾದ ಕಾಫಿ, ಟೀ, ಮದ್ಯಪಾನ ಮತ್ತು ಕಾರ್ಬೋನೇಟೆಡ್ ತಂಪು ಪಾನೀಯಗಳನ್ನು (Soda) ಸೇವಿಸಬೇಡಿ.
ಆಹಾರ: ರಸ್ತೆ ಬದಿಯ ಕತ್ತರಿಸಿದ ಹಣ್ಣುಗಳು ಮತ್ತು ಮಸಾಲೆಯುಕ್ತ ಆಹಾರಗಳನ್ನು ವರ್ಜಿಸಿ.
ತಪ್ಪು ಕ್ರಮ: ಬಿಸಿಲಿನಿಂದ ಬಂದ ತಕ್ಷಣ ಅತಿಯಾದ ತಣ್ಣನೆಯ (Ice Water) ನೀರಿನಿಂದ ಮೈ ಒರೆಸಿಕೊಳ್ಳಬೇಡಿ; ಇದು ದೇಹದ ಒಳಗಿನ ಉಷ್ಣತೆಯನ್ನು ಹೆಚ್ಚಿಸಿ ಅಂಗಾಂಗಗಳ ಮೇಲೆ ಪರಿಣಾಮ ಬೀರಬಹುದು.
ಶಾಖಾಘಾತದ ಲಕ್ಷಣಗಳು ಮತ್ತು ಚಿಕಿತ್ಸೆ:
ವ್ಯಕ್ತಿ ಅಸಂಗತವಾಗಿ ಮಾತನಾಡುತ್ತಿದ್ದರೆ, ಅತಿಯಾದ ಸುಸ್ತು, ಚರ್ಮ ಕೆಂಪಾಗುವುದು ಅಥವಾ ಉಸಿರಾಟ ತೀವ್ರವಾಗಿದ್ದರೆ ಅದನ್ನು ಶಾಖಾಘಾತ ಎಂದು ಪರಿಗಣಿಸಿ. ಇಂತಹ ಸಂದರ್ಭದಲ್ಲಿ ತಕ್ಷಣ ವ್ಯಕ್ತಿಯನ್ನು ನೆರಳಿಗೆ ಕರೆತಂದು, ಬಟ್ಟೆ ಸಡಿಲಗೊಳಿಸಿ, ಸಾಮಾನ್ಯ ನೀರಿನಿಂದ ಮೈ ಒರೆಸಬೇಕು. ತುರ್ತು ನೆರವಿಗಾಗಿ 104 ಸಂಖ್ಯೆಗೆ ಕರೆ ಮಾಡಿ ಅಥವಾ ತಕ್ಷಣ ವೈದ್ಯರನ್ನು ಸಂಪರ್ಕಿಸಿ.








