ಟೋಕಿಯೋ: ಜಪಾನ್ನ ಉತ್ತರ ಭಾಗದಲ್ಲಿ ಇಂದು (ಏಪ್ರಿಲ್ 20, 2026) ಸಂಜೆ 7.4 ತೀವ್ರತೆಯ (ನಂತರ 7.7ಕ್ಕೆ ಪರಿಷ್ಕರಿಸಲಾಗಿದೆ) ಪ್ರಬಲ ಭೂಕಂಪ ಸಂಭವಿಸಿದ್ದು, ಇದರ ಬೆನ್ನಲ್ಲೇ ಕರಾವಳಿ ಪ್ರದೇಶಗಳಿಗೆ ಸುನಾಮಿ ಅಲೆಗಳು ಅಪ್ಪಳಿಸಿವೆ. ಇವಾಟೆ ಪ್ರಾಂತ್ಯದ ಕುಜಿ ಬಂದರಿನಲ್ಲಿ ಸುಮಾರು 80 ಸೆಂಟಿಮೀಟರ್ ಎತ್ತರದ ಸುನಾಮಿ ಅಲೆಗಳು ಕಂಡುಬಂದಿದ್ದು, ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಜಪಾನ್ ಕಾಲಮಾನ ಸಂಜೆ 4:53ಕ್ಕೆ ಇವಾಟೆ ಪ್ರಾಂತ್ಯದ ಪೆಸಿಫಿಕ್ ಸಾಗರದ ಆಳದಲ್ಲಿ ಭೂಕಂಪ ಸಂಭವಿಸಿದೆ. ಇದರ ಕಂಪನವು ನೂರಾರು ಕಿಲೋಮೀಟರ್ ದೂರದ ರಾಜಧಾನಿ ಟೋಕಿಯೋವರೆಗೂ ತಟ್ಟಿದ್ದು, ಬಹುಮಡಿ ಕಟ್ಟಡಗಳು ಸುಮಾರು ಎರಡು ನಿಮಿಷಗಳ ಕಾಲ ತೂಗಾಡಿವೆ.
ಭೂಕಂಪ ಸಂಭವಿಸಿದ 40 ನಿಮಿಷಗಳಲ್ಲೇ ಮೊದಲ ಸುನಾಮಿ ಅಲೆಗಳು ಕರಾವಳಿಯನ್ನು ತಲುಪಿವೆ. ಇವಾಟೆ ಪ್ರಾಂತ್ಯದಲ್ಲಿ 80 ಸೆ.ಮೀ, ಮಿಯಾಕೊ ಬಂದರಿನಲ್ಲಿ 40 ಸೆ.ಮೀ ಮತ್ತು ಅಮೊರಿ ಪ್ರಾಂತ್ಯದಲ್ಲಿ 30 ಸೆ.ಮೀ ಎತ್ತರದ ಅಲೆಗಳು ಅಪ್ಪಳಿಸಿವೆ.
ಜಪಾನ್ ಹವಾಮಾನ ಇಲಾಖೆಯು (JMA) ಆರಂಭದಲ್ಲಿ 3 ಮೀಟರ್ (ಸುಮಾರು 10 ಅಡಿ) ಎತ್ತರದ ಬೃಹತ್ ಸುನಾಮಿ ಅಲೆಗಳು ಬರಬಹುದು ಎಂದು ಎಚ್ಚರಿಕೆ ನೀಡಿತ್ತು. ಹೀಗಾಗಿ ಹೈಕೈಡೋ, ಅಮೊರಿ ಮತ್ತು ಇವಾಟೆ ಪ್ರಾಂತ್ಯದ ಲಕ್ಷಾಂತರ ಜನರನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ.








