ಟೆಹ್ರಾನ್: ಇರಾನ್ ಮೇಲಿನ ಪರಮಾಣು ನಿರ್ಬಂಧಗಳನ್ನು ಬಿಗಿಗೊಳಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಒಂದು ರಾಷ್ಟ್ರದ ಕಾನೂನುಬದ್ಧ ಹಕ್ಕುಗಳನ್ನು ಕಸಿದುಕೊಳ್ಳಲು ಟ್ರಂಪ್ ಯಾರು?” ಎಂದು ಪ್ರಶ್ನಿಸುವ ಮೂಲಕ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.
ಇತ್ತೀಚೆಗಷ್ಟೇ ಡೊನಾಲ್ಡ್ ಟ್ರಂಪ್ ಅವರು ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸದಿದ್ದರೆ ಕಠಿಣ ಆರ್ಥಿಕ ದಿಗ್ಬಂಧನ ಮತ್ತು ಮಿಲಿಟರಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಇದಕ್ಕೆ ಪ್ರತಿಯಾಗಿ ಇರಾನ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪೆಜೆಶ್ಕಿಯಾನ್, ಅಮೆರಿಕದ ದರ್ಪವನ್ನು ಕಟುವಾಗಿ ಟೀಕಿಸಿದರು.
”ಇರಾನ್ ತನ್ನ ಶಾಂತಿಯುತ ಪರಮಾಣು ಇಂಧನ ಬಳಕೆಯ ಹಕ್ಕನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ. ನಾವು ಯಾರಿಗೂ ಹೆದರುವುದಿಲ್ಲ. ನಮ್ಮ ದೇಶದ ಪ್ರಗತಿಯನ್ನು ತಡೆಯಲು ಹೊರಟಿರುವ ಟ್ರಂಪ್, ಒಂದು ಸ್ವತಂತ್ರ ರಾಷ್ಟ್ರದ ಹಕ್ಕನ್ನು ಕಸಿದುಕೊಳ್ಳಲು ಅವರು ಯಾರು?” ಎಂದು ಪೆಜೆಶ್ಕಿಯಾನ್ ಗುಡುಗಿದ್ದಾರೆ.
ಒಂದೆಡೆ ಅಮೆರಿಕದ ಉನ್ನತ ಪ್ರತಿನಿಧಿಗಳು ಪಾಕಿಸ್ತಾನಕ್ಕೆ ಭೇಟಿ ನೀಡಿ ಕದನ ವಿರಾಮದ ಬಗ್ಗೆ ಚರ್ಚಿಸುತ್ತಿದ್ದರೂ, ಇರಾನ್ ಅಧ್ಯಕ್ಷರ ಈ ಹೇಳಿಕೆಯು ಮಾತುಕತೆಯ ಹಾದಿ ಸುಲಭವಿಲ್ಲ ಎಂಬುದನ್ನು ತೋರಿಸುತ್ತಿದೆ.








