ನವದೆಹಲಿ: ಖ್ಯಾತ ಐವೇರ್ ಕಂಪನಿ ‘ಲೆನ್ಸ್‌ಕಾರ್ಟ್’ (Lenskart) ತನ್ನ ಉದ್ಯೋಗಿಗಳಿಗೆ ನೀಡಿದ್ದ ಡ್ರೆಸ್ ಕೋಡ್ ಮಾರ್ಗಸೂಚಿಯಲ್ಲಿ ಧಾರ್ಮಿಕ ತಾರತಮ್ಯ ಮಾಡಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಕಂಪನಿಯ ಸಿಇಒ ಪಿಯುಷ್ ಬನ್ಸಾಲ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ವಿವಾದಾತ್ಮಕ ನಿಯಮಗಳನ್ನು ಕೈಬಿಟ್ಟು, ಎಲ್ಲಾ ಧರ್ಮಗಳ ಸಂಪ್ರದಾಯಗಳಿಗೆ ಮುಕ್ತ ಅವಕಾಶ ನೀಡುವ ಹೊಸ ಶೈಲಿ ಮಾರ್ಗಸೂಚಿಯನ್ನು (Style Guidelines) ಕಂಪನಿ ಈಗ ಬಿಡುಗಡೆ ಮಾಡಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಲೆನ್ಸ್‌ಕಾರ್ಟ್‌ನ ಹಳೆಯ ತರಬೇತಿ ದಾಖಲೆಯೊಂದು ವೈರಲ್ ಆಗಿತ್ತು. ಅದರಲ್ಲಿ ಸ್ಟೋರ್‌ಗಳಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳು ಬಿಂದಿ (ಬೊಟ್ಟು), ತಿಲಕ ಮತ್ತು ಕೈಗೆ ಧಾರ್ಮಿಕ ದಾರ (ಕಲಾವ) ಧರಿಸುವುದನ್ನು ನಿಷೇಧಿಸಲಾಗಿತ್ತು. ಆದರೆ, ಹಿಜಾಬ್ ಮತ್ತು ಟರ್ಬನ್ ಧರಿಸಲು ಕೆಲವು ಷರತ್ತುಗಳೊಂದಿಗೆ ಅವಕಾಶ ನೀಡಲಾಗಿತ್ತು. ಇದು ಹಿಂದೂ ಸಂಪ್ರದಾಯದ ವಿರುದ್ಧದ ತಾರತಮ್ಯ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು ಮತ್ತು ‘ಬಾಯ್ಕಾಟ್ ಲೆನ್ಸ್‌ಕಾರ್ಟ್’ ಅಭಿಯಾನ ಆರಂಭವಾಗಿತ್ತು.
ವಿವಾದ ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತ ಸಿಇಒ ಪಿಯುಷ್ ಬನ್ಸಾಲ್ ಸಾಮಾಜಿಕ ಜಾಲತಾಣ ‘X’ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.
”ವೈರಲ್ ಆಗಿರುವ ದಾಖಲೆಯು ಹಳೆಯದು ಮತ್ತು ಅದು ಕಂಪನಿಯ ಅಧಿಕೃತ ಹೆಚ್‌ಆರ್ (HR) ನೀತಿಯಲ್ಲ. ಅದರಲ್ಲಿ ಬಿಂದಿ ಮತ್ತು ತಿಲಕದ ಬಗ್ಗೆ ಇದ್ದ ತಪ್ಪು ಸಾಲುಗಳನ್ನು ನಾವು ಫೆಬ್ರವರಿಯಲ್ಲೇ ತೆಗೆದುಹಾಕಿದ್ದೇವೆ. ಯಾರ ಭಾವನೆಗಾದರೂ ಧಕ್ಕೆಯಾಗಿದ್ದರೆ ನಾವು ಕ್ಷಮೆಯಾಚಿಸುತ್ತೇವೆ. ಲೆನ್ಸ್‌ಕಾರ್ಟ್ ಯಾವುದೇ ಧಾರ್ಮಿಕ ಆಚರಣೆಯನ್ನು ನಿರ್ಬಂಧಿಸುವುದಿಲ್ಲ,” ಎಂದು ಅವರು ತಿಳಿಸಿದ್ದಾರೆ.








