ಇಸ್ಲಾಮಾಬಾದ್: ಇರಾನ್ ಜೊತೆಗಿನ ಉದ್ವಿಗ್ನತೆಯ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಆಕ್ರಮಣಕಾರಿ ಧಾಟಿ ಪ್ರದರ್ಶಿಸಿದ್ದಾರೆ. “ಇನ್ಮುಂದೆ ನಾನು ಒಳ್ಳೆಯವನಾಗಿ ಇರಲು ಸಾಧ್ಯವಿಲ್ಲ (No More Mr. Nice Guy!)” ಎಂದು ಎಚ್ಚರಿಸಿರುವ ಅವರು, ಇರಾನ್ ಶಾಂತಿ ಒಪ್ಪಂದಕ್ಕೆ ಒಪ್ಪದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ. ಇದರ ಬೆನ್ನಲ್ಲೇ, ಶಾಂತಿ ಮಾತುಕತೆ ನಡೆಸಲು ಅಮೆರಿಕದ ಉನ್ನತ ಮಟ್ಟದ ನಿಯೋಗವು ಸೋಮವಾರ (ಏಪ್ರಿಲ್ 20) ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದೆ.
’ಒಪ್ಪಂದಕ್ಕೆ ಬನ್ನಿ, ಇಲ್ಲವಾದರೆ ಸರ್ವನಾಶಕ್ಕೆ ಸಿದ್ಧರಾಗಿ’
ತಮ್ಮ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ‘ಟ್ರೂತ್ ಸೋಶಿಯಲ್’ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, “ನಾವು ಅತ್ಯಂತ ನ್ಯಾಯಯುತವಾದ ಒಪ್ಪಂದವನ್ನು ಮುಂದಿಟ್ಟಿದ್ದೇವೆ. ಇರಾನ್ ಅದನ್ನು ಒಪ್ಪಿಕೊಳ್ಳುತ್ತದೆ ಎಂದು ಭಾವಿಸುತ್ತೇನೆ. ಒಂದು ವೇಳೆ ಅವರು ಒಪ್ಪದಿದ್ದರೆ, ಇರಾನ್ನ ಪ್ರತಿಯೊಂದು ವಿದ್ಯುತ್ ಸ್ಥಾವರ ಮತ್ತು ಪ್ರತಿಯೊಂದು ಸೇತುವೆಯನ್ನು ನಾವು ಧ್ವಂಸ ಮಾಡುತ್ತೇವೆ,” ಎಂದು ನೇರ ಎಚ್ಚರಿಕೆ ನೀಡಿದ್ದಾರೆ. ಕಳೆದ 47 ವರ್ಷಗಳಿಂದ ಯಾವ ಅಧ್ಯಕ್ಷರೂ ಮಾಡದ ಕೆಲಸವನ್ನು ನಾನು ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷವನ್ನು ಶಮನಗೊಳಿಸಲು ಪಾಕಿಸ್ತಾನ ಸಂಧಾನಕಾರನ ಪಾತ್ರ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಉನ್ನತ ಪ್ರತಿನಿಧಿಗಳಾದ ಜೇರೆಡ್ ಕುಶ್ನರ್ ಮತ್ತು ಸ್ಟೀವ್ ವಿಟ್ಕಾಫ್ ಅವರು ಸೋಮವಾರ ಇಸ್ಲಾಮಾಬಾದ್ಗೆ ಆಗಮಿಸಲಿದ್ದಾರೆ. ಒಂದು ವೇಳೆ ಇಸ್ಲಾಮಾಬಾದ್ನಲ್ಲಿ ಒಪ್ಪಂದಕ್ಕೆ ಅಂತಿಮ ಮುದ್ರೆ ಬಿದ್ದರೆ, ಸ್ವತಃ ಡೊನಾಲ್ಡ್ ಟ್ರಂಪ್ ಅವರೇ ಪಾಕಿಸ್ತಾನಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.








