ಚಿತ್ರದುರ್ಗ : ಚಿತ್ರದುರ್ಗದಲ್ಲಿ ಮನೆಯೊಂದರಲ್ಲಿ ಸಿಲಿಂಡರ್ ಒಂದು ಸ್ಫೋಟಗೊಂಡಿದ್ದು, ಗುಡಿಸಲು ಮನೆ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಪ್ಪಗೊಂಡನಹಳ್ಳಿ ಗ್ರಾಮದಲ್ಲಿ ಚಿತ್ರಲಿಂಗಪ್ಪ ಅವರಿಗೆ ಸೇರಿದ ಮನೆ ಬೆಂಕಿಗೆ ಆಹುತಿಯಾಗಿದೆ.
ಸಿಲಿಂಡರ್ ಸ್ಫೋಟದಿಂದ ಉಂಟಾದ ಬೆಂಕಿಯಲ್ಲಿ ಮನೆಯಲ್ಲಿದ್ದ ಸುಮಾರು 3 ಲಕ್ಷ ರೂಪಾಯಿ ನಗದು, ಚಿನ್ನಾಭರಣ ಹಾಗೂ ದವಸ ಧಾನ್ಯಗಳು ಸುಟ್ಟು ಭಸ್ಮವಾಗಿವೆ. ಅಗ್ನಿಶಾಮಕ ದಳವು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದು, ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತಹಶೀಲ್ದಾರ್ ರೇಹಾನ್ ಪಾಷ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








