ನವದೆಹಲಿ: ಮಹಿಳಾ ಮೀಸಲಾತಿ ಮಸೂದೆ (ನಾರಿ ಶಕ್ತಿ ವಂದನ್ ಅಧಿನಿಯಮ) ಲೋಕಸಭೆಯಲ್ಲಿ ಸೋಲನುಭವಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಶನಿವಾರ ದೇಶವನ್ನುದ್ದೇಶಿಸಿ ಮಾತನಾಡಿದ್ದರು. ವಿರೋಧ ಪಕ್ಷಗಳು ಮಹಿಳಾ ವಿರೋಧಿ ಎಂದು ಪ್ರಧಾನಿ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್ ಸೇರಿದಂತೆ ‘ಇಂಡಿಯಾ’ (INDIA) ಮೈತ್ರಿಕೂಟದ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದು, ಪ್ರಧಾನಿಯವರ ಭಾಷಣವನ್ನು ‘ಪಕ್ಷಪಾತದ ಪ್ರಚಾರ’ ಮತ್ತು ‘ಡ್ರಾಮೇಬಾಜಿ’ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಪ್ರಧಾನಿ ಭಾಷಣವನ್ನು ಖಂಡಿಸಿದ್ದು, “ಇದು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಂತಿಲ್ಲ, ಬದಲಿಗೆ ಚುನಾವಣಾ ಪ್ರಚಾರದಂತಿದೆ. ಮಸೂದೆ ವಿಫಲವಾದ ಬಗ್ಗೆ ಪ್ರಧಾನಿ ಕ್ಷಮೆಯಾಚಿಸಬೇಕಿತ್ತು, ಆದರೆ ಅವರು ವಿರೋಧ ಪಕ್ಷಗಳನ್ನು ದೂಷಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ,” ಎಂದು ಆಕ್ರೋಶ ಹೊರಹಾಕಿದ್ದಾರೆ.
ಲೋಕಸಭೆಯಲ್ಲಿ ಮಸೂದೆ ಬಿದ್ದ ನಂತರ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ಬಿಜೆಪಿ ಸರ್ಕಾರವು ಮಹಿಳೆಯರ ಹೆಸರಿನಲ್ಲಿ ಸಂವಿಧಾನವನ್ನು ಮುರಿಯಲು ‘ಅಸಂವಿಧಾನಿಕ ತಂತ್ರ’ ಬಳಸುತ್ತಿದೆ. ದೇಶ ಇದನ್ನು ಗಮನಿಸುತ್ತಿದೆ, ನಾವು ಇದನ್ನು ತಡೆದಿದ್ದೇವೆ,” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್ ಹೆಸರು ಉಲ್ಲೇಖಿಸಿರುವುದನ್ನು ಲೇವಡಿ ಮಾಡಿದ್ದು, “ಪ್ರಧಾನಿಯವರಿಗೆ ಮಹಿಳೆಯರ ಹಿತಾಸಕ್ತಿಗಿಂತ ಕಾಂಗ್ರೆಸ್ ಅನ್ನು ಟೀಕಿಸುವುದೇ ಮುಖ್ಯವಾಗಿದೆ. ಅವರ ಆದ್ಯತೆಗಳು ಎಲ್ಲರಿಗೂ ತಿಳಿದಿವೆ,” ಎಂದು ಲೇವಡಿ ಮಾಡಿದ್ದಾರೆ.








