ಬೆಂಗಳೂರು : ಕೊನೆಗೂ ಅಂಗನವಾಡಿ ಕಾರ್ಯಕರ್ತೆಯರ ದಶಕಗಳ ಕನಸು ಕೊನೆಗೂ ನನಸಾಗುವ ಕಾಲ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿನ ‘ಮಹಿಳಾ ಮೇಲ್ವಿಚಾರಕಿ’ ಹುದ್ದೆಗಳಲ್ಲಿ ಶೇ.75 ಹುದ್ದೆಗಳಿಗೆ ಅರ್ಹ ಅಂಗನವಾಡಿ ಕಾರ್ಯಕರ್ತೆಯರು ಬಡ್ತಿ ಮೂಲಕ ನೇಮಕವಾಗಲಿದ್ದಾರೆ. ಈ ಸಂಬಂಧ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಿ ಅರ್ಹರಿಗೆ ನ್ಯಾಯ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
2015 ಅಧಿಸೂಚನೆ ಹೊರಡಿಸಿದ್ದ ಕೇಂದ್ರ ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿನ ಮಹಿಳಾ ಮೇಲ್ವಿಚಾರಕಿ ಹುದ್ದೆಗಳಲ್ಲಿ ಶೇ.50 ಸೇವಾ ಜೇಷ್ಠತೆ ಆಧಾರದಡಿ ಪದವೀಧರ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸುವಂತೆ ನಿರ್ದೇಶಿಸಿತ್ತು. ಈ ಅಧಿಸೂಚನೆ ಪರಿಗಣಿಸಿ ಬಡ್ತಿ ನೀಡುವಂತೆ ಹಲವಾರು ಅಂಗನವಾಡಿ ಕಾರ್ಯಕರ್ತೆಯರುಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.
ಆದರೆ, ಸರ್ಕಾರದ ವೃಂದ ಮತ್ತು ನೇಮಕ ನಿಯಮಗಳಲ್ಲಿ ತಿ ದ್ದುಪಡಿ ಮಾಡದ ಕಾರಣ ಬಡ್ತಿ ನೀಡಲು ಸಾಧ್ಯವಾಗಿರಲಿಲ್ಲ. ಬದಲಾಗಿ 557 ಮೇಲ್ವಿಚಾರಕಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಮುಂದಾಗಿತ್ತು. ಈ ನಿರ್ಧಾರ ಪ್ರಶ್ನಿಸಿ ಪ್ರಶ್ನಿಸಿ ಹೈಕೋರ್ಟ್‌ನ ಬೆಂಗಳೂರು ಮತ್ತು ಕಲಬುರಗಿ ಪೀಠಗಳಲ್ಲಿ ವಿವಿಧ ಅರ್ಜಿಗಳು ಸಲ್ಲಿಕೆಯಾಗಿದ್ದವು. ಅರ್ಜಿ ವಿಚಾರಣೆ ನಡೆಸಿ ಫೇಬ್ರವರಿ ತಿಂಗಳಲ್ಲಿ ಆದೇಶ ನೀಡಿರುವ ಕಲಬುರಗಿ ಪೀಠ, ಅರ್ಹ ಅಂಗನವಾಡಿ ಕಾರ್ಯಕರ್ತೆಯರನ್ನು ಬಡ್ತಿ ಮೂಲಕ ಮಹಿಳಾ ಮೇಲ್ವಿಚಾರಕಿ ಹುದ್ದೆಗೆ ನೇಮಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಬೆಂಗಳೂರು ಪೀಠದಲ್ಲಿ ಪ್ರತ್ಯೇಕ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ಕಲಬುರಗಿ ಪೀಠದ ತೀರ್ಪನ್ನು ಉಲ್ಲೇಖಿಸಿ ಅರ್ಜಿ ಪರಿಗಣಿಸಿದೆ. ಅರ್ಜಿದಾರರ ಬೇಡಿಕೆಯಂತೆ ಅರ್ಹ ಅಂಗನವಾಡಿ ಕಾರ್ಯಕರ್ತೆಯರನ್ನು ಮಹಿಳಾ ಮೇಲ್ವಿಚಾರಕಿ ಹುದ್ದೆಗಳಿಗೆ ನೇಮಿಸುವಂತೆ ಆದೇಶಿಸಿದೆ. ಈ ಸಂಬಂಧ 4 ತಿಂಗಳೊಳಗೆ ಜಿಲ್ಲಾವಾರು ಸೇವಾ ಜೇಷ್ಠತೆ ಪಟ್ಟಿ ಬಿಡುಗಡೆ ಮಾಡಿ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದೆ. ಬಡ್ತಿ ಪ್ರಕ್ರಿಯೆಯಲ್ಲಿ ಯಾವುದೇ ಸಂದರ್ಶನ ಇರುವುದಿಲ್ಲ. ಬದಲಾಗಿ ಅಭ್ಯರ್ಥಿಗಳ ವಿದ್ಯಾರ್ಹತೆಯ ಅಂಕಗಳೊಂದಿಗೆ ಪ್ರತಿ 5 ವರ್ಷಗಳ ಸೇವಾ ಜೇಷ್ಠತೆಗೆ 4 ವೇಟೇಜ್ ಅಂಕ ನೀಡಬೇಕು. ಇದನ್ನು ಪರಿಗಣಿಸಿ ಬಡ್ತಿ ನೀಡಬೇಕು ಎಂದು ಹೈಕೋರ್ಟ್ ತಿಳಿಸಿದೆ.








