ವಾಷಿಂಗ್ಟನ್: ಇರಾನ್ ಮೇಲಿನ ಒತ್ತಡವನ್ನು ತೀವ್ರಗೊಳಿಸಿರುವ ಅಮೆರಿಕ, ಈಗ ಆ ದೇಶದ ಪ್ರಮುಖ ಬಂದರುಗಳಿಗೆ ಸಂಪೂರ್ಣ ‘ದಿಗ್ಬಂಧನ’ (Blockade) ವಿಧಿಸಲು ಮುಂದಾಗಿದೆ. ಇರಾನ್‌ನಿಂದ ಹೊರಹೋಗುವ ಮತ್ತು ಒಳಬರುವ ಯಾವುದೇ ಸರಕು ಸಾಗಣೆಯನ್ನು ತಡೆಯಲು ಅಮೆರಿಕ ತನ್ನ 12 ಅತ್ಯಾಧುನಿಕ ಯುದ್ಧನೌಕೆಗಳು ಮತ್ತು 100 ಯುದ್ಧವಿಮಾನಗಳನ್ನು ಪರ್ಷಿಯನ್ ಗಲ್ಫ್ ಸೇರಿದಂತೆ ಆಯಕಟ್ಟಿನ ಜಾಗಗಳಲ್ಲಿ ನಿಯೋಜಿಸಿದೆ.
ಇರಾನ್‌ನ ತೈಲ ರಫ್ತು ಮತ್ತು ಆಮದು ವ್ಯವಹಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು ಅಮೆರಿಕದ ಈ ಕಾರ್ಯಾಚರಣೆಯ ಮುಖ್ಯ ಗುರಿಯಾಗಿದೆ. ಇರಾನ್‌ಗೆ ಆರ್ಥಿಕವಾಗಿ ಹೊಡೆತ ನೀಡಲು ಅಮೆರಿಕ ಈ ಕಠಿಣ ಕ್ರಮಕ್ಕೆ ಮುಂದಾಗಿದೆ.
ಅಮೆರಿಕದ ನೌಕಾಪಡೆಯ 12 ಬೃಹತ್ ಹಡಗುಗಳು ಇರಾನ್‌ನ ಸಮುದ್ರ ಗಡಿಯ ಸುತ್ತಲೂ ಹದ್ದಿನ ಕಣ್ಣಿಟ್ಟಿವೆ. ಇದರ ಜೊತೆಗೆ, ವೈಮಾನಿಕ ನಿಗಾ ವಹಿಸಲು ಮತ್ತು ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು 100 ಯುದ್ಧವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಇರಾನ್ ಬಂದರುಗಳತ್ತ ಸಾಗುವ ಸಂಶಯಾಸ್ಪದ ಹಡಗುಗಳನ್ನು ತಡೆದು ತಪಾಸಣೆ ನಡೆಸಲು ಅಮೆರಿಕದ ಪಡೆಗಳಿಗೆ ಆದೇಶ ನೀಡಲಾಗಿದೆ. ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಈ ರೀತಿಯ ಕ್ರಮವು ಯುದ್ಧದ ಭೀತಿಯನ್ನು ಹೆಚ್ಚಿಸಿದೆ.








