ನವದೆಹಲಿ: ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಉಪಸಭಾಪತಿಯಾಗಿ ಹರಿವಂಶ್ ನಾರಾಯಣ್ ಸಿಂಗ್ ಅವರು ಸತತ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಲು ಸಜ್ಜಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ನಂತರ, ಎನ್‌ಡಿಎ (NDA) ಅಭ್ಯರ್ಥಿಯಾಗಿ ಹರಿವಂಶ್ ಅವರು ಇಂದು ಅಧಿಕೃತವಾಗಿ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಕಾಂಗ್ರೆಸ್ ಸೇರಿದಂತೆ ಪ್ರಮುಖ ವಿರೋಧ ಪಕ್ಷಗಳು ಈ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿವೆ. ವಿರೋಧ ಪಕ್ಷದ ಪರವಾಗಿ ಯಾವುದೇ ಅಭ್ಯರ್ಥಿಯು ನಾಮಪತ್ರ ಸಲ್ಲಿಸದ ಕಾರಣ ಹರಿವಂಶ್ ಅವರ ಆಯ್ಕೆ ಸುಗಮವಾಗಿದೆ.
ರಾಜ್ಯಸಭೆಯಲ್ಲಿ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತವನ್ನು ಹೊಂದಿದ್ದು, ಹರಿವಂಶ್ ಅವರ ಪರವಾಗಿ 5ಕ್ಕೂ ಹೆಚ್ಚು ಪ್ರಸ್ತಾವನೆಗಳು ಸಲ್ಲಿಕೆಯಾಗಿವೆ.
ಏಪ್ರಿಲ್ 9 ರಂದು ಇವರ ಎರಡನೇ ಅವಧಿ ಮುಕ್ತಾಯವಾಗಿತ್ತು. ಮರುದಿನವೇ ರಾಷ್ಟ್ರಪತಿಗಳು ಇವರನ್ನು ಪತ್ರಿಕೋದ್ಯಮ ಕ್ಷೇತ್ರದ ಕೋಟಾದಡಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದರು. ಇದು ಅವರು ಮತ್ತೆ ಉಪಸಭಾಪತಿ ಹುದ್ದೆಗೇರಲು ಹಾದಿ ಮಾಡಿಕೊಟ್ಟಿತು.
ಕಳೆದ ಎರಡು ಅವಧಿಗಳಲ್ಲಿ ಸದನವನ್ನು ನಡೆಸಿದ ರೀತಿ ಮತ್ತು ಸಭ್ಯ ವರ್ತನೆಯಿಂದಾಗಿ ಹರಿವಂಶ್ ಅವರು ಪಕ್ಷಾತೀತವಾಗಿ ಮನ್ನಣೆ ಗಳಿಸಿದ್ದಾರೆ.







