ನ್ಯೂಯಾರ್ಕ್: ನ್ಯೂಯಾರ್ಕ್ ನಗರದ ನೂತನ ಮೇಯರ್ ಝೋಹ್ರಾನ್ ಮಮ್ದಾನಿ ಅವರ ಮಹತ್ವಾಕಾಂಕ್ಷೆಯ ತೆರಿಗೆ ಸುಧಾರಣಾ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರವಾಗಿ ಟೀಕಿಸಿದ್ದಾರೆ. “ಈ ಯೋಜನೆಯು ನ್ಯೂಯಾರ್ಕ್ ನಗರವನ್ನು ಸಂಪೂರ್ಣವಾಗಿ ನಾಶಪಡಿಸಲಿದೆ ಮತ್ತು ಪರಿಸ್ಥಿತಿ ಇನ್ನೂ ಹದಗೆಡಲಿದೆ” ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಮಮ್ದಾನಿ ಅವರ ತೆರಿಗೆ ಏರಿಕೆಯ ಪ್ರಸ್ತಾವನೆಯನ್ನು ಕಟುವಾಗಿ ಟೀಕಿಸಿರುವ ಟ್ರಂಪ್, “ನ್ಯೂಯಾರ್ಕ್ ಈಗಾಗಲೇ ಸಂಕಷ್ಟದಲ್ಲಿದೆ. ಈಗ ಜನರಿಗೆ ಹೆಚ್ಚಿನ ತೆರಿಗೆ ಹೊರೆ ಹಾಕುವ ಮೂಲಕ ನಗರದ ಆರ್ಥಿಕತೆಯನ್ನು ಸಾಯಿಸಲಾಗುತ್ತಿದೆ,” ಎಂದು ಗುಡುಗಿದ್ದಾರೆ.
ಮೇಯರ್ ಅವರ ಈ ಯೋಜನೆಯಿಂದಾಗಿ ವ್ಯಾಪಾರಸ್ಥರು ಮತ್ತು ಶ್ರೀಮಂತರು ನ್ಯೂಯಾರ್ಕ್ ನಗರವನ್ನು ಬಿಟ್ಟು ಪ್ಲೋರಿಡಾದಂತಹ ರಾಜ್ಯಗಳಿಗೆ ವಲಸೆ ಹೋಗಲಿದ್ದಾರೆ. ಇದು ನಗರದ ಆದಾಯಕ್ಕೆ ಹೊಡೆತ ನೀಡಲಿದೆ ಎಂದು ಟ್ರಂಪ್ ವಿಶ್ಲೇಷಿಸಿದ್ದಾರೆ.
ತೆರಿಗೆ ಹೆಚ್ಚಿಸುವ ಬದಲು ನಗರದಲ್ಲಿ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಯುವತ್ತ ಮೇಯರ್ ಗಮನಹರಿಸಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ. “ನಗರವನ್ನು ಸುರಕ್ಷಿತವಾಗಿಡಲು ಸಾಧ್ಯವಾಗದವರು ಜನರ ಹಣವನ್ನು ಕಿತ್ತುಕೊಳ್ಳಲು ಮುಂದಾಗಿದ್ದಾರೆ” ಎಂದು ಟ್ರಂಪ್ ಕಿಡಿಕಾರಿದ್ದಾರೆ.








